ಬೆಂಗಳೂರು: ದೇಶದಲ್ಲಿ ತನಿಖಾ ಸಂಸ್ಥೆ ಉಪಯೋಗಿಸಿಕೊಳ್ಳಲಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿ ದಾಳಿ ನಡೆಯುತ್ತಿದೆ. ಸಂಸತ್ ಅಧಿವೇಶನವಿದ್ದರೂ ಜು.21 ರಂದು ಇಡಿ ತನಿಖೆಗೆ ಕರೆದಿದ್ದಾರೆ. ಕಿರುಕುಳ ಕೊಡುವ ಕೆಲಸ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು 50 ಗಂಟೆ ತನಿಖೆ ಮಾಡಿದ್ದರು, ಯಾವುದೇ ಸಾಕ್ಷಿಯನ್ನು ಅಧಿಕಾರಿಗಳು ಕೊಟ್ಟಿಲ್ಲ. ಕೇಳಿದ್ದ ಪ್ರಶ್ನೆಯನ್ನೇ ಕೇಳಿ ಕಿರುಕುಳ ಕೊಟಿದ್ದಾರೆ. ಸೋನಿಯಾ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ನಮ್ಮ ನಾಯಕಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಹಾಗಾಗಿ 21 ರಂದು ಬೃಹತ್ ಪ್ರತಿಭಟನೆ ಮಾಡುತ್ತಿದ್ದೇವೆ. ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಶಾಸಕರು, ನಾಯಕರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಬೇಕು. ಬಂಧನ ಮಾಡಿದರೂ ಚಿಂತೆ ಇಲ್ಲ, ಹೋರಾಟ ಮಾಡಲೇಬೇಕು. ಯಾವುದಕ್ಕೂ ಹೆದರುವ ಪ್ರಶ್ನೆಯಿಲ್ಲ. ನಾವೆಲ್ಲ ಸೇರಿ ಪ್ರತಿಭಟನೆ ಮಾಡಲೇಬೇಕು ಎಂದರು.
ಫ್ರೀಡಂ ಪಾರ್ಕ್ ನಿಂದ ರಾಜಭವನದವರೆಗೆ ಪ್ರತಿಭಟನೆ ಮಾಡುತ್ತೇವೆ. 22 ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಮಾಡುತ್ತೇವೆ. 30 ಜಿಲ್ಲೆಗೆ ವೀಕ್ಷಕರ ನೇಮಿಸಿದ್ದೇವೆ. ನಾನು, ಸಿದ್ದರಾಮಯ್ಯ, ಹರಿಪ್ರಸಾದ್, ಕಾರ್ಯಧ್ಯಕ್ಷರು ಎಲ್ಲರೂ ಜಿಲ್ಲಾ ಕೇಂದ್ರಗಳಿಗೆ ಹೋಗುತ್ತೇವೆ ಎಂದರು.
ಇದನ್ನೂ ಓದಿ:ಮಡಿಕೇರಿ – ಮಂಗಳೂರು: ರಸ್ತೆ ಸಂಚಾರ ಬಂದ್, ಬದಲಿ ರಸ್ತೆಯಲ್ಲಿ ಸಂಚರಿಸಲು ಸೂಚನೆ
ಆ.15 ರಂದು ವಾಕ್ ಫಾರ್ ಫ್ರೀಡಂ ಪಾದಯಾತ್ರೆ ಮಾಡುತ್ತೇವೆ. ಪಕ್ಷಾತೀತವಾಗಿ ಪಾದಯಾತ್ರೆ ಇರುತ್ತದೆ. ಎಲ್ಲಾ ಸಂಘ ಸಂಸ್ಥೆಗಳಿಗೆ ಆಹ್ವಾನ ಕೊಟ್ಟಿದ್ದೇವೆ. ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದವರ ಮನೆಗೆ ಹೋಗುತ್ತೇವೆ. ಅವರಿಗೆ ಗೌರವ ಕೊಡುವ ಕೆಲಸ ಮಾಡುತ್ತೇವೆ. ಬೆಂಗಳೂರು ಸೇರಿದಂತೆ ಎಲ್ಲ ಕಡೆಯಿಂದ ಜನರು ಭಾಗಿಯಾಗುತ್ತಾರೆ. ಇದು ಕಾಂಗ್ರೆಸ್ ಕಾರ್ಯಕ್ರಮವಲ್ಲ, ರಾಷ್ಟ್ರದ ಕಾರ್ಯಕ್ರಮ ಎಂದು ಡಿಕೆ ಶಿವಕುಮಾರ್ ಹೇಳಿದರು.