Advertisement

ಬಿಜೆಪಿ ತಾಲೂಕು ಘಟಕದಿಂದ ಪ್ರತಿಭಟನೆ

05:24 PM Jul 19, 2018 | Team Udayavani |

ಹಾವೇರಿ: ನಗರಸಭೆ ಅಧ್ಯಕ್ಷರ ವಿರುದ್ಧ ಮಂಡಿಸಿರುವ ಅವಿಶ್ವಾಸ ಮಂಡನೆ ಠರಾವನ್ನು ಜಿಲ್ಲಾಧಿಕಾರಿ ಅಮಾನತು ಮಾಡಿರುವುದು ಹಾಗೂ ಕಾನೂನು ಉಲ್ಲಂಘಿಸಿ ನಗರಸಭಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿರುವುದನ್ನು ಖಂಡಿಸಿ ಬಿಜೆಪಿ ತಾಲೂಕು ಘಟಕ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

Advertisement

ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ನಗರಸಭೆಯ ಬಿಜೆಪಿ ಸದಸ್ಯರು ಎಂ.ಜಿ. ರಸ್ತೆ, ಹೊಸಮನಿ, ಸಿದ್ದಪ್ಪ ವೃತ್ತದ ಮೂಲಕ ಮೈಲಾರ ಮಹದೇವಪ್ಪ ವೃತ್ತದ ವರೆಗೆ ಸಂಚರಿಸಿದರು. ಮಾರ್ಗದುದ್ದಕ್ಕೂ ಜಿಲ್ಲಾಧಿಕಾರಿ, ನಗರಯೋಜನಾ ನಿರ್ದೇಶಕರು, ಪೌರಾಯುಕ್ತರು, ಮಾಜಿ ಸಚಿವ ರುದ್ರಪ್ಪ ಲಮಾಣಿ, ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಹಲಗಣ್ಣನವರ ಹಾಗೂ ಕಾಂಗ್ರೆಸ್‌ ವಿರುದ್ಧ  ಧಿಕ್ಕಾರದ ಫಲಕ ಹಿಡಿದು ಘೋಷಣೆ ಕೂಗಿದರು.

ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ನೆಹರು ಓಲೇಕಾರ, ಜಿಲ್ಲಾಧಿಕಾರಿಯವರು ಕಾಂಗ್ರೆಸ್‌ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಪುರಸಭೆ ಕಾಯ್ದೆ 2003ರಲ್ಲಿ ಆಗಿರುವ ತಿದ್ದುಪಡಿಯಂತೆ ಬಿಜೆಪಿ ಸದಸ್ಯರು ನಗರಸಭೆ ಅಧ್ಯಕ್ಷರ ವಿರುದ್ಧ ಮಂಡಿಸಿದ ಅವಿಶ್ವಾಸ ಕಾನೂನಾತ್ಮಕವಾಗಿದೆ. ಆದರೂ ಜಿಲ್ಲಾಧಿಕಾರಿಯವರು ಹಳೆಯ ಕಾನೂನು ಓದಿಕೊಂಡು ಠರಾವನ್ನು ಅಮಾನತು ಮಾಡಿದ್ದಾರೆ. ಪೊಲೀಸರ ರಕ್ಷಣೆಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಸೂಚಿಸಿದ್ದಾರೆ. ಪೌರಾಯುಕ್ತರು, ನಗರ ಯೋಜನಾ ನಿರ್ದೇಶಕರು, ಉಪವಿಭಾಗಾಧಿಕಾರಿ ಯಾರಿಗೂ ತಿದ್ದುಪಡಿಯಾಗಿರುವ ಕಾನೂನಿನ ಜ್ಞಾನವೇ ಇಲ್ಲ. ಕಾಂಗ್ರೆಸ್‌ನವರಿಗೆ ನಿಷ್ಠೆ ತೋರಲು ಹೋಗಿ ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದರು.

ಚುನಾವಣೆಯಲ್ಲಿ ಗೆದ್ದಾಗಿನಿಂದ ನಿತ್ಯ ಎಲ್ಲ ವಾರ್ಡ್‌, ಪಂಚಾಯತ್‌ಗಳಿಗೆ ಸಂಚಾರ ಮಾಡಿ ಸಮಸ್ಯೆಗಳನ್ನು ಅರಿತು, ಬಗೆಹರಿಸುವ ಕೆಲಸ ಮಾಡುತ್ತಿದ್ದೇನೆ. ಕೊಳಚೆ ನಿರ್ವಹಣೆಗೆ ಸೂಚಿಸಿ, ನಗರವನ್ನು ಸ್ವತ್ಛಗೊಳಿಸುವ ಕಾರ್ಯ ಮಾಡಿಸಿದ್ದೇನೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಮಾಡಿದ್ದ ಅವ್ಯವಸ್ಥೆಗಳನ್ನೆಲ್ಲ ಸರಿಪಡಿಸುವ ಕೆಲಸ ಮಾಡಿದ್ದೇನೆ. ಇನ್ನಷ್ಟು ಕೆಲಸಗಳನ್ನು ಮಾಡಬೇಕೆಂದರೆ ಅಧ್ಯಕ್ಷರ ಸಹಿ ಬೇಕು. ಈಗಿರುವ ಕಾಂಗ್ರೆಸ್‌ನ ಅಧ್ಯಕ್ಷರು ಸಹಿ ಹಾಕುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ನಿರಂಜನ ಹೇರೂರು, ಜಿಲ್ಲಾ ವಕ್ತಾರ ಸುರೇಶ ಹೊಸಮನಿ, ಮಲ್ಲಿಕಾರ್ಜುನ ಹಾವೇರಿ, ಕರಬಸಪ್ಪ ಹಳದೂರ, ಕೆ.ಸಿ. ಕೋರಿ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next