Advertisement

18ರಿಂದ ಸಿಎಂ ಸ್ವಕ್ಷೇತ್ರದಲ್ಲಿ ನಿರಂತರ ಧರಣಿ

04:55 PM May 06, 2022 | Team Udayavani |

ಚಿತ್ರದುರ್ಗ: ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಮೀನಾಮೇಷ ಎಣಿಸುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಮೇ 18ರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ಷೇತ್ರ ಶಿಗ್ಗಾವಿಯಲ್ಲಿ ನಿರಂತರ ಧರಣಿ ಹಮ್ಮಿಕೊಳ್ಳಲು ರೈತ ಸಂಘದ ರಾಜ್ಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ ತಿಳಿಸಿದರು.

Advertisement

ನಗರದ ರೈತ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕೈಗಾರಿಕೆಗಳಲ್ಲಿ ತಯಾರಾಗುವ ವಸ್ತುವಿನ ದರವನ್ನು ಅದರ ಮಾಲೀಕರು ನಿರ್ಧಾರ ಮಾಡುತ್ತಾರೆ. ಆದರೆ ರೈತ ಮಾತ್ರ ತಾನು ಬೆಳೆದ ಬೆಳೆಗೆ ದರ ನಿಗದಿ ಮಾಡುವ ಹಕ್ಕು ಹೊಂದಿಲ್ಲ. ಮಾರುಕಟ್ಟೆಯಲ್ಲಿ ಹರಾಜು ಹಾಕುವ ಮೂಲಕ ರೈತ ಬೆವರು ಸುರಿಸಿ ಬೆಳೆದ ಬೆಳೆಗೆ ಮೂರನೇ ವ್ಯಕ್ತಿ ಬೆಲೆ ನಿಗದಿ ಮಾಡುವ ಸ್ಥಿತಿ ಶೋಚನೀಯ. ಮಾರುಕಟ್ಟೆಯಲ್ಲಿ ನಿಗ ದಿಯಾಗುವ ದರದಿಂದ ರೈತನಿಗೆ ನಷ್ಟವಾಗುತ್ತದೆ ಎಂಬ ಅರಿವು ದಲ್ಲಾಳಿಗಳಿಗೆ ಇರುವುದಿಲ್ಲ. ರೈತನ ಪರಿಶ್ರಮಕ್ಕೆ ಬೆಲೆಯನ್ನೇ ನೀಡುವುದಿಲ್ಲ. ಎಲ್ಲರೂ ಅವರ ಲಾಭವನ್ನು ಮಾತ್ರ ನೋಡಿಕೊಳ್ಳುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ದೊರೆತು 75 ವರ್ಷ ಕಳೆದರೂ ರೈತರ ಬದುಕು ಹಸನಾಗಿಲ್ಲ. ಮಾರುಕಟ್ಟೆಯಲ್ಲಿ ಎಲ್ಲ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದೆ. ರೈತ ತನ್ನ ಬೆಳೆಗೆ ತಾನೇ ಬೆಲೆ ನಿಗದಿ ಮಾಡಬೇಕು. ಇಲ್ಲದಿದ್ದರೆ ವ್ಯವಸಾಯದ ಉದ್ದೇಶಕ್ಕೆ ತಾನು ಬೆಳೆದ ಬೆಳೆಗಳನ್ನೇ ಹಣದ ಬದಲಾಗಿ ತೆಗೆದುಕೊಳ್ಳುವಂತಾಗಬೇಕು. ಈ ಪ್ರಯೋಗ ಹೊಸದುರ್ಗದಲ್ಲಿ ನಡೆದಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತನ ಬೆಳೆಗೆ ಬೆಲೆ ನಿಗದಿ ಮಾಡಲು ವಿವಿಧ ಆಯೋಗಗಳನ್ನು ರಚನೆ ಮಾಡಿ ವರದಿ ತರಿಸಿಕೊಂಡು ಸುಮ್ಮನೆ ಕುಳಿತಿವೆ. ಆಯೋಗ ನೀಡಿದ ವರದಿಯನ್ನು ಜಾರಿ ಮಾಡುವಲ್ಲಿ ಯಾವ ಸರ್ಕಾರಗಳೂ ಆಸಕ್ತಿ ತೋರಿಸುತ್ತಿಲ್ಲ. ಇದರಿಂದಾಗಿ ರೈತ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾನೆ. ಇದನ್ನು ತಪ್ಪಿಸುವ ಸಲುವಾಗಿ ಮೇ 18ರಂದು ಮುಖ್ಯಮಂತ್ರಿಗಳ ಸ್ವಕ್ಷೇತ್ರ ಶಿಗ್ಗಾವಿಯ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಹೇಳಿದರು.

ಸರ್ಕಾರ ವಿದ್ಯುತ್‌ ಬೆಲೆಯನ್ನು ಯೂನಿಟ್‌ ಗೆ ಹೆಚ್ಚಳ ಮಾಡಿದೆ. ಅದು ಸಹ ನಾಲ್ಕು ಹಂತದಲ್ಲಿ ಹೆಚ್ಚಳವಾಗುತ್ತಿದೆ. ಇದನ್ನು ರೈತ ಸಂಘ ವಿರೋಧಿಸುತ್ತದೆ. ಮುಂದಿನ ದಿನದಲ್ಲಿ ಬೆಸ್ಕಾಂ ಸೇರಿದಂತೆ ಇತರೆ ಇಲಾಖೆಗಳಿಂದ ರೈತ ಉಪಯೋಗವನ್ನು ಪಡೆದರೆ ಆಗ ಹಣಕ್ಕೆ ಬದಲಾಗಿ ತಾನು ಬೆಳೆದ ಬೆಳೆಗೆ ಬೆಲೆಯನ್ನು ನಿಗದಿ ಮಾಡಿ ಸಂಬಂಧಪಟ್ಟ ಇಲಾಖೆಗೆ ನೀಡುವಂತಹ ಕಾರ್ಯ ಮಾಡಲಾಗುತ್ತದೆ ಎಂದ ಸಿದ್ಧವೀರಪ್ಪ ಎಚ್ಚರಿಸಿದರು.

Advertisement

ಇಂದು ಶಿಕ್ಷಣ ವ್ಯವಹಾರವಾಗಿದೆ. ಪ್ರತಿ ಖಾಸಗಿ ಶಾಲೆಯಲ್ಲೂ ನಿಗದಿಗಿಂತ ಹೆಚ್ಚು ಹಣ ವಸೂಲು ಮಾಡುತ್ತಿದ್ದಾರೆ. ಜತೆಗೆ ಪುಸ್ತಕ, ಶೂ, ಬಟ್ಟೆ ಎಂದು ದುಪ್ಪಟ್ಟು ಹಣ ವಸೂಲು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಯಲ್ಲಿ ಶುಲ್ಕದ ಸಂಪೂರ್ಣ ವಿವರ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಹೊನ್ನಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಕೂಪ್ಪದ ಶಿವಪ್ಪ, ರಾಘವೇಂದ್ರ ನಾಯ್ಕ, ಪ್ರಕಾಶ್‌ ನಾಯ್ಕ, ಮಲ್ಲಿಕಾರ್ಜನ್‌, ರವಿಕುಮಾರ್‌, ರೂಪ, ಷಡಾಕ್ಷರಪ್ಪ ಮತ್ತಿತರರು ಇದ್ದರು.

ರೈತರ ಪರವಾಗಿರುವವರು ವಿಧಾನಸಭೆಯಲ್ಲಿ ಇಲ್ಲದಿರುವುದರಿಂದ ಸಮಸ್ಯೆಯಾಗಿದೆ. ಆದ್ದರಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೈತ ಸಂಘದಿಂದ ಅಥವಾ ಬೇರೆ ಪಕ್ಷದ ನೆರವಿನಿಂದ ಸ್ಪರ್ಧೆ ಮಾಡುವ ಬಗ್ಗೆ ಆಲೋಚನೆ ನಡೆಯುತ್ತಿದೆ. ಎಎಪಿ ಪಕ್ಷದ ಸಿದ್ಧಾಂತಗಳಿಗೆ ನಮ್ಮ ಸಿದ್ಧಾಂತಗಳು ಹತ್ತಿರವಾಗಿವೆ. ಈ ಬಗ್ಗೆ ಜಿಲ್ಲೆ, ತಾಲೂಕು ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. -ಈಚಘಟ್ಟದ ಸಿದ್ಧವೀರಪ್ಪ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next