ಕುಕನೂರು: ಸಮರ್ಪಕವಾಗಿ ನೀರು ಪೂರೈಸದ ಹಿನ್ನೆಲೆಯಲ್ಲಿ ತಾಲೂಕಿನ ರಾಜೂರು ಗ್ರಾಮದ ಆಶ್ರಯ ಕಾಲೋನಿಯ ಗ್ರಾಮ ಪಂಚಾಯತ್‌ಗೆ ಮುತ್ತಿಗೆ ಹಾಕಿದ ಮಹಿಳೆಯರು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು.
ನಿತ್ಯ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಕೊಡ ಹಿಡಿದು ಗ್ರಾಮದ ಹೊರವಲಯದಲ್ಲಿರುವ ತೋಟದ ಪಂಪ್‌ಸೆಟ್‌ಗಳಿಗೆ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ನಿತ್ಯ ಶಾಲೆಗೆ ಹೋಗುವ ಮಕ್ಕಳನ್ನು ನೀರಿಗಾಗಿ ಕಳಿಸಲಾಗುತ್ತಿದೆ. ಈಗಾಗಲೇ ಹಲವು ಭಾರೀ ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಮ ಪಂಚಾಯತ್‌ನ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡಿದ್ದೇವೆ. ಆದರೂ ಸಹ ನೀರಿನ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಗ್ರಾಪಂ ವಿಫಲವಾಗುತ್ತಿದೆ ಎಂದು ದೂರಿದರು.
ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಅಧಿಕಾರಿ ವರ್ಗದವರು ಗಮನ ಹರಿಸುತ್ತಿಲ್ಲ. ಕಾಲೋನಿಗೆ ಸಮೀಪ ಇರುವ ನೀರಿನ ಟ್ಯಾಂಕರ್‌ಗೆ ನೀರು ಪೂರೈಸಿ ನೀರು ಸರಬರಾಜು ಮಾಡಿದರೆ ಆಶ್ರಯ ಕಾಲೋನಿಯ ನೀರಿನ ಸಮಸ್ಯೆಗೆ ಸ್ಪಂದನೆ ಸಿಕ್ಕಂತ್ತಾಗುತ್ತದೆ. ಟ್ಯಾಂಕರ್ ಮೂಲಕ ಪೂರೈಸಿದ ನೀರು ಸಾಕಾಗುವುದಿಲ್ಲ. ಸಮಸ್ಯೆ ಇಮ್ಮಡಿ ಆಗುವ ಮೊದಲು ಸಂಬಂಧಪಟ್ಟವರು ಕೂಡಲೇ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಡಿಒ ಮಲ್ಲಪ್ಪ ಜತ್ತಿ, ಕಾಲೋನಿಯ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿದ್ದೇವೆ. ನೀರಿನ ಸಮಸ್ಯೆ ದ್ವಿಗುಣ ಆಗದಂತೆ ಕಂದಾಯ ಇಲಾಖೆ ಸಹ ನಿತ್ಯ ನಾಲ್ಕೈದು ಟ್ಯಾಂಕರ್ ನೀರಿನ ಪೂರೈಕೆಗೆ ಮುಂದಾಗಿದೆ. ಶಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಆಶ್ರಯ ಕಾಲನಿ ನಿವಾಸಿಗಳಾದ ಸಂಗಮ್ಮ ಚಿಲ್ಕಮುಖೀ, ದೇವಮ್ಮ ಉಪ್ಪಾರ, ಸುಮಂಗಲಾ ಕವಲೂರು, ಅಕ್ಕಮ್ಮ ಅಂಗಡಿ, ಸುಮಾ ಬಡ್ಡಿ, ಪಾರ್ವತಮ್ಮ ಭಜಂತ್ರಿ, ಸುಭದ್ರವ್ವ ಹರಿವಗೇರಿ, ಮಲ್ಲಮ್ಮ ಮಂಡ್ಲಿಗೇರಿ, ಗಿರಿಜಮ್ಮ ಹೂಗಾರ, ಲಲಿತಮ್ಮ ಅರಿಕೇರಿ, ಹನುಮಂತ ಉಪ್ಪಾರ, ಮಲ್ಲಪ್ಪ ಚಿಲ್ಕಮುಖೀ, ಚನ್ನಬಸಪ್ಪ ಮುಂಡರಗಿ, ಫಕೀರಸಾಬ್ ನದಾಫ್, ಶ್ರೀಶೈಲ್ ಅಂಗಡಿ, ಸಂಗಯ್ಯ ಹಿರೇಮಠ, ಕೊಟೇಶ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.