Advertisement

ನೀರಾವರಿಗಾಗಿ ನಿಲ್ಲದು ಹೋರಾಟದ ಕಿಚ್ಚು

07:28 AM May 21, 2019 | Suhan S |

ಕೂಡ್ಲಿಗಿ: ಬರಗಾಲಕ್ಕೆ ತುತ್ತಾಗುವ ಮೂಲಕ ಅತೀ ಹಿಂದುಳಿದ ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಯಾಗುವವರೆಗೂ ಹೋರಾಟದ ಕಿಚ್ಚು ನಿಲ್ಲುವುದಿಲ್ಲ ಎಂದು ಕಾನಮಡುಗು ದಾಸೋಹ ಮಠದ ಐಮಡಿ ಶರಣಾರ್ಯರು ತಿಳಿಸಿದರು.

Advertisement

ತಾಲೂಕಿನ ಕಾನಮಡುಗು ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಸಮಗ್ರ ನೀರಾವರಿ ಯೋಜನೆ ಜಾರಿಯ ಸಮಾಲೋಚನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಜಲ ಮೂಲಗಳೇ ಇಲ್ಲವಾಗಿದ್ದು, ಮಳೆಯಾಶ್ರಿತವಾಗಿದೆ. ಸತತವಾಗಿ ವರುಣನ ಅವಕೃಪೆಯಿಂದ ನೀರಿಗೆ ಹಾಹಾಕಾರವಿದೆ. ನೀರಾವರಿ ಸೌಲಭ್ಯ ಕಲ್ಪಿಸುವಂತೆ ಸಾಕಷ್ಟು ಬಾರಿ ಹೋರಾಟ ನಡೆಸಿದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಹೀಗಾಗಿ, ತಾಲೂಕಿನ ಪ್ರತಿ ಹಳ್ಳಿಯಲ್ಲೂ ಜನರನ್ನು ಜಾಗೃತಗೊಳಿಸಿ ಹೋರಾಟದ ಮೂಲಕ ಸರ್ಕಾರಗಳಿಗೆ ಎಚ್ಚರಿಕೆ ಮೂಡಿಸಲಾಗುವುದು. ಸಮಗ್ರ ನೀರಾವರಿ ಯೋಜನೆ ಜಾರಿಯಿಂದ ಮಾತ್ರ ತಾಲೂಕಿನ ಜನರು ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂಬುದನ್ನು ಸ್ಥಳೀಯ ಜನಪ್ರತಿನಿಧಿಗಳು ಅರ್ಥೈಸಿಕೊಂಡು ಸರ್ಕಾರದ ಗಮನ ಸೆಳೆಯಬೇಕು ಎಂದರು.

ಜನಪರ ಹೋರಾಟಗಾರ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಸಿಂಗಟಾಲೂರು ಯೋಜನೆ ಅಥವಾ ಗರ್ಭಗುಡಿ ಯೋಜನೆಯಲ್ಲಿ 8.45 ಟಿಎಂಸಿ ನೀರು ಲಭ್ಯವಿದ್ದು, ಆ ಪೈಕಿ ಹರಪನಹಳ್ಳಿ ತಾಲೂಕಿನ 50 ಕೆರೆಗಳಿಗೆ ನೀರು ತುಂಬಿಸಲು ಅರ್ಧ ಟಿಎಂಸಿ ಬಿಡಲಾಗಿದೆ. ಜಗಳೂರು ತಾಲೂಕಿಗೂ ಸೌಲಭ್ಯ ಸಿಕ್ಕಿದೆ. ಗರ್ಭಗುಡಿ ಯೋಜನೆಯನ್ನು ಕೂಡ್ಲಿಗಿ ತಾಲೂಕಿಗೂ ವಿಸ್ತರಿಸಲು ಹೋರಾಟ ಅನಿವಾರ್ಯವಾಗಿದೆ ಎಂದರು.

ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಸ್ವಾಮೀಜಿ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಜಗಳೂರು ತಾಲೂಕು ಹೋರಾಟಗಾರ ನಾಗಲಿಂಗಪ್ಪ, ಸಾವಯವ ಕೃಷಿಕ ಹುಲಿಕೆರೆ ಎಚ್.ವಿಶ್ವೇಶ್ವರ ಸಜ್ಜನ್‌, ರೈತ ಸಂಘದ ತಾಲೂಕು ಅಧ್ಯಕ್ಷ ಕಕ್ಕುಪ್ಪಿ ಬಸವರಾಜ, ಜಿಪಂ ಸದಸ್ಯ ಎಚ್.ರೇವಣ್ಣ, ಮಾಜಿ ಸದಸ್ಯ ಕೆ.ಎಂ.ಶಶಿಧರ, ಬಾಪೂಜಿ ಸಮೂಹ ಸಂಸ್ಥೆ ಅಧ್ಯಕ್ಷ ಕೆ.ಎಂ.ವೀರೇಶ್‌, ಶಾಲಾ ಭೂದಾನಿ ತಾಯಕನಹಳ್ಳಿ ಗನಿಸಾಬ್‌, ಹೊಸಹಳ್ಳಿ ಮಲ್ಲೇಶ್‌ ಮಾತನಾಡಿದರು. ತಾಪಂ ಸದಸ್ಯರಾದ ಹುಡೇಂ ಪಾಪನಾಯಕ, ಗುರುಸಿದ್ದನಗೌಡ, ಪ್ರಗತಿಪರ ರೈತ ಎ.ಚನ್ನಬಸಪ್ಪ, ರಮೇಶಗೌಡ, ವಕೀಲ ಧಮೇಂದ್ರನಾಯ್ಕ, ಡಾ.ರಾಘವೇಂದ್ರ ನಾಯ್ಕ, ಬಣವಿಕಲ್ಲು ರಾಜು, ತಳವಾರ ಶರಣಪ್ಪ, ಮಂಡಲ ಮಾಜಿ ಪ್ರಧಾನ ನಾಗರಾಜಪ್ಪ, ಮೈಲಹಳ್ಳಿ ದಿನೇಶ್‌, ಪುನೀತ, ದಯಾನಂದ ಸಜ್ಜನ್‌, ಸಚಿನ್‌, ಕಿಟ್ಟಪ್ಪರ ವೀರೇಶ್‌, ಕೆಂಚಮನಹಳ್ಳಿ ಬಸವರಾಜ, ಸುರೇಶ್‌ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next