ಚನ್ನಪಟ್ಟಣ: ತಿಂಗಳು ಕಳೆದರೂ ಕುಡಿಯುವ ನೀರು ಸರಬರಾಜಿಲ್ಲ ಹಾಗೂ ನೀರಿನ ಪೈಪ್ ಗಳ ದುರಸ್ತಿಗಾಗಿ ತೆರದ ಗುಂಡಿಯನ್ನು ಮುಚ್ಚದೆ ಬಿಟ್ಟಿರುವ ಕಾವೇರಿ ನೀರಾವರಿ ನಿಗಮದ ಬೀಜಾವಾಬ್ದಾರಿ ಖಂಡಿಸಿ, ಕರ್ನಾಟಕ ದಂಡಿನ ಮಾರಮ್ಮ ರಾಜ್ಯ ರೈತ ಸಂಘ ಹಾಗೂ ಪಟ್ಟಣದ ಪಾರ್ವತಿ ಚಿತ್ರಮಂದಿರ ರಸ್ತೆಯ ನಿವಾಸಿಗಳು, ಕಾವೇರಿ ನೀರಾವರಿ ನಿಗಮದ ಕಚೇರಿಯ ಗೇಟ್ ಬಂದ್ ಮಾಡಿ ಪ್ರತಿಭಟಿಸಿದರು.
ಪಾರ್ವತಿ ಚಿತ್ರಮಂದಿರದ ರಸ್ತೆಗೆ ಹೊಂದಿಕೊಂಡಿರುವ ಬೋರ್ ದುರಸ್ತಿಗೆ ಒಂದು ತಿಂಗಳು ಕಳೆಯುತ್ತಿದ್ದರೂ, ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿ, ಬೋರ್ ದುರಸ್ತಿಗೆ ಮುಚ್ಚಿದ ಸಿಮೆಂಟ್ ಚಪ್ಪಡಿಗಳನ್ನು ತೆರೆದು ಇದುವರೆಗೂ ಮುಚ್ಚಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳ ಕ್ರಮಕ್ಕೆ ಧಿಕ್ಕಾರ: ಈ ಭಾಗದ ನಿವಾಸಿಗಳಿಗೆ ಈ ರೀತಿಯ ಅವ್ಯವಸ್ಥೆಯಿಂದ ಕುಡಿ ಯುವ ನೀರಿಗೆ ತೀವ್ರ ಸಮಸ್ಯೆ ಉಂಟಾಗಿ, ಟ್ರ್ಯಾಕ್ಟರ್ ನೀರಿಗೆ ಹಾಗೂ ಪಕ್ಕದ ರಸ್ತೆಯಲ್ಲಿ ನೀರು ಶೇಖರಣೆ ಮಾಡುವ ದುಸ್ಥಿತಿಗೆ ಬಂದಿದ್ದಾರೆ. ಅಲ್ಲದೆ ದುರಸ್ತಿ ಗೆಂದು ಮುಚ್ಚಿದ ಸಿಮೆಂಟ್ ಚಪ್ಪಡಿಗಳನ್ನು ತಗೆದು ಬಿಟ್ಟಿದ್ದರಿಂದ, ತೆರದ ಬಾವಿಯಂತೆ ಅನಾಹು ತಕ್ಕೆ ದಾರಿ ಮಾಡಿ ಕೊಟ್ಟಿದ್ದರೂ, ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವ ನಿಗಮದ ಅಧಿಕಾರಿಗಳ ವರ್ತನೆ ವಿರುದ್ಧ ಪ್ರತಿಭಟನಕಾರರು ಧಿಕ್ಕಾರ ಕೂಗಿದರು.
ನಿಗಮದ ಅಧಿಕಾರಿಗಳಿಗೆ ಹಿಡಿಶಾಪ: ಪ್ರತಿಭಟನೆಯಲ್ಲಿ ಖಾಲಿ ಬಿಂದಿಗೆ ಹೊತ್ತ ಮಹಿಳೆಯರು, ನಿಗಮದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು. ಒಂದು ತಾಸು ಕಳೆದರೂ ಪ್ರತಿಭಟನಾ ಸ್ಥಳಕ್ಕೆ ಯಾವ ಅಧಿಕಾರಿಗಳು ಬಾರದ ಹಿನ್ನೆಲೆ, ನಿಗಮದ ಕಚೇರಿಯ ಮುಂಬದಿಯ ಗೇಟ್ ಬಂದ್ ಮಾಡಿದ ಪ್ರತಿಭಟನಕಾರರು ಗೇಟ್ ಮುಂದೆ ಕುಳಿತು ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಖಾಲಿ ಬಿಂದಿಗೆ ಪ್ರದರ್ಶನ: ಖಾಲಿ ಬಿಂದಿಗೆ ಹೊತ್ತ ನೀರೆಯರಂತೂ ತಮ್ಮದೇ ಆದ ದಾಟಿಯಲ್ಲಿ ಅಧಿಕಾರಿಗಳ ಉಡಾಫೆ ತನಕ್ಕೆ ಧಿಕ್ಕಾರ ಕೂಗಿ, ಕುಡಿಯುವ ನೀರಿನ ಸಮಸ್ಯೆಯನ್ನು ಹಲವಾರು ದಿನಗಳಿಂದ ನಾವು ಅನುಭವಿಸುತ್ತಿದ್ದು, ನಿಮ್ಮ ಮನೆಯಲ್ಲಿ ಈ ರೀತಿಯಾದರೇ ನೀವು ಏನು ಮಾಡುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು: ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾವೇರಿ ನಿಗಮದ ಎಂಜಿನಿಯರ್ ಸದಾಶಿವಯ್ಯ ಶನಿವಾರ ಬೋರ್ ದುರಸ್ತಿಪಡಿಸಿ ನೀರು ನೀಡಲಾಗುವುದು ಎಂದು ತಿಳಿಸಿದರೂ, ತೃಪ್ತರಾಗ ಪ್ರತಿಭಟನಕಾರರು, ಸಂಬಂಧಿಸಿದ ಜೆ.ಇ. ಪ್ರಭಾಕರ್ ಹಾಗೂ ನಿಗಮದ ಎಇಇ ಪುಟ್ಟಯ್ಯ ಎಂಬುವರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು.
ಒಂದು ದಿನ ಕಾಲಾವಕಾಶ ಕೇಳಿದ ಅಧಿಕಾರಿ: ಜೆ.ಇ. ಪ್ರಭಾಕರ್‌ಗೆ ಅನಾರೋಗ್ಯ ಹಾಗೂ ಎಇಇ ದೂರದಲ್ಲಿರುವುದರಿಂದ, ಅಧಿಕಾರಿಗಳಿಂದ ಕರೆ ಮಾಡಿಸಿ, ಪ್ರತಿಭಟನಕಾರರಿಗೆ ಕ್ಷಮಾಪಣೆ ಕೇಳಿ, ಕೂಡಲೇ ಬೋರ್ ದುರಸ್ತಿ ಮಾಡಿಸಿ ನೀರು ನೀಡಲಾಗುವುದು. ನಮಗೆ ಒಂದು ದಿನದ ಕಾಲವಕಾಶ ನೀಡುವಂತೆ ಮನವಿ ಮಾಡಿದ್ದರಿಂದ, ಅಧಿಕಾರಿಗಳ ಮಾತಿಗೆ ಮನ್ನಣೆ ನೀಡಿ ಪ್ರತಿಭಟನೆ ಹಿಂಪಡೆಯಲಾಯಿತು.
ಕರ್ನಾಟಕ ದಂಡಿನ ಮಾರಮ್ಮ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ವಿಠೇಲನಹಳ್ಳಿ ಕೃಷ್ಣೇಗೌಡ, ಬಾಲು ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ವಿ.ವೆಂಕಟಸುಬ್ಬಯ್ಯ ಚಟ್ಟಿ, ಮುಖಂಡರಾದ ಅಪ್ಪಾಜಿ, ಮಹೇಶ್, ರಾಜೇಶ್, ಚೌದರಿ, ಮಾಸ್ಟರ್ ರಾಮಣ್ಣ, ಧರ್ಮಣ್ಣ, ರಾಮ ಚಂದ್ರು, ಟೈಲರ್ ಮಹೇಶ್, ವಕೀಲ ಶಿವಪ್ರಸಾದ್, ದೇವರಾಜು, ಸಂತೋಷ್, ಆಟೋರಾಜು, ವರ, ಮುನಿಯಮ್ಮ ಇದ್ದರು