ಕುಣಿಗಲ್: ಗೌರವಧನಕ್ಕಾಗಿ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿ, ಅಧಿಕಾರಿಗಳ ದೌರ್ಜನ್ಯ, ದಬ್ಟಾಳಿಕೆಯನ್ನು ಖಂಡಿಸಿದರು.
ನಿರಂತರ ದಬ್ಟಾಳಿಕೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ಗೌರವಧನ ನೀಡಿಲ್ಲ ಹಾಗೂ ನೌಕರರ ಮೇಲೆ ನಿರಂತರ ದಬ್ಟಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಶಾಂತಕುಮಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೂಡಲೇ ಗೌರವಧನ ನೀಡಬೇಕು ಹಾಗೂ ದೌರ್ಜನ್ಯ ಎಸಗುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕಚೇರಿಯಲ್ಲಿ ಶೌಚಗೃಹವಿಲ್ಲ: ನೌಕರರ ಸಂಘದ ಅಧ್ಯಕ್ಷೆ ಶಾಂತಕುಮಾರಿ ಮಾತನಾಡಿ ಕಾಯಂ ಸಿಡಿಪಿಒ ಇಲ್ಲದ ಕಾರಣ, ಮಹಿಳಾ ಸಂರಕ್ಷಣಾಧಿಕಾರಿಗಳು ಪ್ರಭಾರ ಸಿಡಿಪಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನೌಕರರಿಗೆ ಯಾವುದೇ ಸಂರಕ್ಷಣೆ ನೀಡದೆ ವಿನಾ ಕಾರಣ ದೌರ್ಜನ್ಯ ಮಾಡುವ ಮೂಲಕ ತೀವ್ರ ತೊಂದರೆ ನೀಡುತ್ತಿದ್ದಾರೆ, ಅಲ್ಲದೆ ಮೇಲ್ವಿಚಾರಕರು ಚೀಟಿ ವ್ಯವಹಾರ ನಡೆಸಿ ನೌಕರರೊಂದಿಗೆ ಹಣಕಾಸು ಲೇವಾದೇವಿ ನಡೆಸುತ್ತಿದ್ದಾರೆ. ಅವರ ಮಾತು ಕೇಳುವ ನೌಕರರಿಗೆ ಯಾವುದೇ ತೊಂದರೆ ನೀಡುವುದಿಲ್ಲ. ಅವರ ಮಾತು ಕೇಳದ ನೌಕರರಿಗೆ ಸಣ್ಣಪುಟ್ಟ ವಿಚಾರಗಳಿಗೆ ವಿನಾಕಾರಣ ನೋಟಿಸ್ ನೀಡಿ ದಬ್ಟಾಳಿಕೆ ನಡೆಸುತ್ತಿದ್ದಾರೆ. ಮೂರು ತಿಂಗಳಿಗೆ ಒಮ್ಮೆ ನೌಕರರ ಕುಂದು ಕೊರತೆ ಸಭೆ ಕರೆಯಬೇಕೆಂಬ ನಿಯಮವಿದ್ದರೂ ಮೂರು ತಿಂಗಳಾದರೂ ಮೀಟಿಂಗ್ ಕರೆಯದೆ ನಿಯಮ ಗಾಳಿಗೆ ತೂರಲಾಗಿದೆ. ಕಚೇರಿಯಲ್ಲಿ ಶೌಚಗೃಹವಿಲ್ಲದೆ ನೌಕರರಿಗೆ ತೊಂದರೆಯಾಗಿದೆ. ಸಮಸ್ಯೆ ಸರಿಪಡಿಸುವಂತೆ ಕೇಳಿದರೆ ಬೈದು ಕಳುಹಿಸುತ್ತಾರೆ ಎಂದು ಆರೋಪಿಸಿದರು.
ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ 365ಕ್ಕೂ ಅಧಿಕ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಕಳೆದ ಮೂರು ತಿಂಗಳಿನಿಂದ ಗೌರವಧನ ನೀಡಿಲ್ಲ. ಇದರಿಂದ ಅಂಗನವಾಡಿ ನೌಕರರ ಕುಟುಂಬ ನಿರ್ವಹಣೆಗೆ ತೀವ್ರ ತೊಂದರೆ ಉಂಟಾಗಿದೆ. ಆದರೆ ತಾಲೂಕಿನ ನೆರೆಯ ಜಿಲ್ಲೆಯಾದ ಮಂಡ್ಯದಲ್ಲಿ ಮೂರು ತಿಂಗಳಿನಿಂದ ಗೌರವ ಧನ ನೀಡಿದ್ದಾರೆ. ಆದರೆ ನಮ್ಮ ಜಿಲ್ಲೆಯ ನೌಕರರಿಗೆ ಏಕೆ ನೀಡಿಲ್ಲ ಎಂದು ಪ್ರಶ್ನಿಸಿದರು.
ಎಲ್ಲ ಸರ್ಕಾರಿ ಕೆಲಸಗಳಿಗೆ ಅಂಗನವಾಡಿ ನೌಕರರು ಬೇಕು. ಆದರೆ ಗೌರವಧನ ಮಾತ್ರ ನೀಡುತ್ತಿಲ್ಲ ಎಂದು ಕಿಡಿಕಾರಿದರು. ಕೂಡಲೇ ನೌಕರರಿಗೆ ಗೌರವ ಧನ ನೀಡಬೇಕು. ದೌರ್ಜನ್ಯ, ದಬ್ಟಾಳಿಗೆ ನಡೆಸುವ ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಶಾಂತಕುಮಾರಿ ಒತ್ತಾಯಿಸಿದರು. ಬಳಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯ ದರ್ಶಿ ಗೌರಮ್ಮ, ಖಜಾಂಚಿ ಗೀತಾ, ಪ್ರಮುಖರಾದ ನಸೀಮಾ, ಅನ್ನಪೂರ್ಣ, ಮಂಜುಳ, ಭಾಗ್ಯ ಮತ್ತಿತರರು ಇದ್ದರು.