ದೇವನಹಳ್ಳಿ: ತಾಲೂಕಿನ ಕೊಯಿರಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ರೀತಿ ಚಿಕಿತ್ಸೆ ವೈದ್ಯರು ನೀಡುತ್ತಿಲ್ಲ. ಕೂಡಲೇ ಅವರನ್ನು ಬೇರೆ ಕಡೆಗೆ ವರ್ಗಾಯಿಸಿ ಉತ್ತಮ ಸೌಲಭ್ಯ ನೀಡುವ ವೈದ್ಯರನ್ನು ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಎರಡು ದಿನಗಳ ಹಿಂದೆ ನಾಯಿ ಕಡಿತ ಚುಚ್ಚುಮದ್ದು ಹಾಕಿಸಲು ಹೋದವರಿಗೆ ವೈದ್ಯರು ತಮಗೆ ನಾಯಿ ಚುಚ್ಚು ಮದ್ದು ಗೊತ್ತಿಲ್ಲವೆಂದು ಹೇಳುತ್ತಾರೆ. ಇಂಥ ವೈದ್ಯರಿಂದ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವುದು ಹೇಗೆ. ಇಂಥ ವೈದ್ಯರನ್ನು ಶೀಘ್ರ ವರ್ಗಾವಣೆ ಮಾಡಬೇಕು. ಈ ಹಿಂದೆ ಇದ್ದ ವೈದ್ಯರು ಚೆನ್ನಾಗಿ ಆರೋಗ್ಯ ತಪಾಸಣೆ ಮಾಡುತ್ತಿದ್ದರು. ಈಗಿನ ವೈದ್ಯರಿಗೆ ಏನೂ ತಿಳಿಯುತ್ತಿಲ್ಲ, ವೈದ್ಯೆಯಾಗಿ ಬಂದಿರುವ ರಶ್ಮಿ ಅವರನ್ನು ಬದಲಾಯಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಂಡುಮಗು ಸಾಯಿಸಲು ಈ ವೈದ್ಯರು ಬೇಕಾ: ಗ್ರಾಮದ ಮಹಿಳೆಯರಾದ ರಾಮಕ್ಕ ಮಾತನಾಡಿ ಈ ಹಿಂದೆ ಇದ್ದ ಡಾ.ರಮೇಶ್ ಅವರ ಕರ್ತವ್ಯ ಸಂದರ್ಭದಲ್ಲಿ ಆಸ್ಪತ್ರೆಗೆ ಹೆಚ್ಚು ರೋಗಿಗಳು ಬರುತ್ತಿದ್ದರು. ಉತ್ತಮ ಚಿಕಿತ್ಸೆ ದೊರೆಯುತ್ತಿತ್ತು. ಡಾ.ರಶ್ಮಿ ಬಂದಮೇಲೆ ರೋಗಿಗಳ ಸಂಖ್ಯೆ ಇಳಿಕೆಯಾಗಿದೆ. ಯಾವ ಕಾಯಿಲೆಗೆ ಯಾವ ಔಷಧಿ, ಚುಚ್ಚುಮದ್ದು ನೀಡುವುದು ಎಂಬುವುದು ತಿಳಿದಿರುವುದಿಲ್ಲ. ಅಂದರೆ ಚಿಕಿತ್ಸೆ ಯಾವರೀತಿ ನೀಡುತ್ತಾರೆ. ಗರ್ಭದಲ್ಲೇ ಗಂಡುಮಗು ಸಾಯಿಸಲು ಈ ವೈದ್ಯರು ಬೇಕಾ, ಆಸ್ಪತ್ರೆ ಬಿಟ್ಟು ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂಥ ವೈದ್ಯರ ಅನಿವಾರ್ಯತೆ ನಮಗಿಲ್ಲ: ಕೆ-ಹೊಸೂರು ಗ್ರಾಮದ ಭಾಗ್ಯಮ್ಮ ಮಾತನಾಡಿ ನನ್ನ ಸೊಸೆಗೆ ಈ ಹಿಂದೆ ಒಂದು ಹೆಣ್ಣುಮಗು ಆಗಿದೆ. ನಂತರ ಮೂರು ತಿಂಗಳ ಗರ್ಭಿಣಿಯಾದ ನಂತರ ಐದು ತಿಂಗಳ ವರೆಗೆ ಮಗು ಬೆಳವಣಿಗೆ ಬಗ್ಗೆ 15 ದಿನಕ್ಕೊಮ್ಮೆ ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ವೈದ್ಯೆ ರಶ್ಮಿ ಗರ್ಭಿಣಿ ಹೊಟ್ಟೆಯನ್ನು ಮುಟ್ಟುತ್ತಿರಲಿಲ್ಲ. ಇಂಜೆಕ್ಷನ್ ಹಾಕಿ, ಮಾತ್ರೆ ಕೊಟ್ಟು ಮಗು ಬೆಳವಣಿಗೆ ಚೆನ್ನಾಗಿ ಇದೆ ಎಂದು ಸುಳ್ಳು ಹೇಳುತ್ತಾರೆ. ಇಂಥ ವೈದ್ಯರ ಅನಿವಾರ್ಯತೆ ನಮಗಿಲ್ಲ ಎಂದು ಕಿಡಿಕಾರಿದರು.
ಕೈಗೆ ಹಾಕುವುದೋ ಅಥವಾ ಸೊಂಟಕ್ಕೆ ಹಾಕುವುದೋ?: ಗ್ರಾಮದ ಮುಖಂಡ ಚಿಕ್ಕೆಗೌಡ ಕಳೆದ 2 ದಿನದ ಹಿಂದೆ ನಾಯಿ ಕಡಿತ ಚುಚ್ಚುಮದ್ದು ಲಸಿಕೆ ಹಾಕಿಸಲು ಮಗುವನ್ನು ಕರೆದ ತಂದಿದ್ದರು. ವೈದ್ಯೆ ರಶ್ಮಿಯವರು ನರ್ಸ್ ಬರಬೇಕು. ಎಷ್ಟು ಡ್ರಾಪ್ ಹಾಕಬೇಕು ಎಂದು ತಮಗೆ ತಿಳಿದಿಲ್ಲ, ಸದ್ಯಕ್ಕೆ ನರ್ಸ್ ರಜೆ ಹೋಗಿದ್ದಾರೆ. ನಾನೆಂದು ನಾಯಿ ಕಡಿತಕ್ಕೆ ಚುಚ್ಚುಮದ್ದು ಹಾಕಿರುವುದಿಲ್ಲ, ಕೈಗೆ ಹಾಕುವುದೋ ಅಥವಾ ಸೊಂಟಕ್ಕೆ ಹಾಕುವುದೋ ಎಂದು ತಮಗೆ ಗೊತ್ತಿಲ್ಲ ಎಂದು ಬೇಜಾಬ್ದಾರಿಯಿಂದ ಹಾರಕೆ ಉತ್ತರ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಅನೂಕೂಲಕ್ಕಾಗಿ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಡಿದ್ದಾರೆ. ಗ್ರಾಮೀಣ ಪ್ರದೇಶದ ಜನ ನಗರ ಪ್ರದೇಶಕ್ಕೆ ಹೋಗಲು ಆಗುವುದಿಲ್ಲ. ಇಂಥ ವೈದ್ಯರನ್ನು ಸರ್ಕಾರ ನೇಮಕ ಮಾಡಿದರೆ ರೋಗಿಗಳು ಗುಣಮುಖರಾಗದೆ ನರಳಿ ನರಳಿ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂಥ ವೈದ್ಯರನ್ನು ಕೂಡಲೇ ಮನೆಗೆ ಕಳುಹಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕು ಆರೋಗ್ಯಾಧಿಕಾರಿಯಾಗಿ ಡಾ.ರಶ್ಮಿ ಕಾರ್ಯನಿರ್ವಹಿಸುತ್ತಿದ್ದರು. ಆರೋಗ್ಯ ಇಲಾಖೆ ಇವರನ್ನು ಕೊಯಿರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿತ್ತು. ಗ್ರಾಮಸ್ಥರಾದ ಸವಿತಾ, ರಂಗಮ್ಮ, ರತ್ನಮ್ಮ, ಯಶೋಧಮ್ಮ, ಗಾಯಿತ್ರಿ ಮತ್ತಿತರರಿದ್ದರು.
ನಾಯಿ ಚುಚ್ಚು ಮದ್ದು ಹೊರತು ಪಡಿಸಿ ಎಲ್ಲಾ ರೋಗದ ಲಕ್ಷಣಗಳಿಗೆ ಚುಚ್ಚುಮದ್ದನ್ನು ನೀಡುತ್ತೇನೆ. ನಾಯಿ ಕಡಿತದ ಚುಚ್ಚು ಮದ್ದು ಗೊತ್ತಿಲ್ಲ.
●ಡಾ.ರಶ್ಮಿ, ಕೊಯಿರಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ
ವೈದ್ಯರಾದವರು ನಾಯಿ ಚುಚ್ಚುಮದ್ದು ನೀಡುವುದು ಗೊತ್ತಿಲ್ಲವೆಂದು ಹೇಳಬಾರದು, ಹೇಳಿರುವುದು ತಪ್ಪು. ವೈದ್ಯರ ಬಗ್ಗೆ ದೂರು ಬಂದಿರುವುದರ ಬಗ್ಗೆ ಪರಿಶೀಲನೆ ನಡೆಸಿ ಮೇಲಧಿಕಾರಿಗಳಿಗೆ ಸಮಗ್ರ ಮಾಹಿತಿ ನೀಡಲಾಗುವುದು. ಕೆಲವು ರೋಗಿಗಳು ಡಾ.ರಶ್ಮಿ
ಚಿಕಿತ್ಸೆ ಸರಿಯಾದ ರೀತಿ ನೀಡುತ್ತಿದ್ದಾರೆ ಎಂದಿದ್ದಾರೆ.
●ಡಾ.ಸಂಜಯ್ , ತಾಲೂಕು ವೈದ್ಯಾಧಿಕಾರಿ