ಬೈಲಹೊಂಗಲ: ಬೈಲಹೊಂಗಲ-ಬೆಳಗಾವಿ ಮಾರ್ಗವಾಗಿ ನಿರ್ಮಾಣಗೊಂಡ ನೂತನ ರಸ್ತೆ ಬಳಿ ಏಕಾಎಕಿ ಟೋಲ್ ಸಂಗ್ರಹಣೆ ಪ್ರಾರಂಭಿಸಿದ್ದರಿಂದ ರೈತ ಸಂಘಟನೆಯ ಪದಾಧಿ ಕಾರಿಗಳು ಟೋಲ್ ಸಂಗ್ರಹದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದ ಸುಮಾರು 2 ಗಂಟೆ ಕಾಲ ಸಂಚಾರ ಅಸ್ತವ್ಯಸ್ತ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಪ್ರತಿಭಟನೆಯಲ್ಲಿ ರೈತ ಮುಖಂಡರು ಮಾತನಾಡಿ, ಹಿರೇಬಾಗೇವಾಡಿ-ಸವದತ್ತಿ ಬೈಲಹೊಂಗಲ ಮಾರ್ಗವಾಗಿ ನಿರ್ಮಾಣಗೊಂಡ ನೂತನ ರಸ್ತೆ ಸಮೀಪದ ಸಾಣಿಕೊಪ್ಪ ಗ್ರಾಮದ ಸವದತ್ತಿ ತಾಲೂಕಿನ ಕರೀಕಟ್ಟಿ ಗ್ರಾಮದ ಬಳಿ ಡಿ. 7ರಂದು ಪ್ರಾರಂಭವಾಗಬೇಕಿದ್ದ ಟೋಲ್ ಸಂಗ್ರಹವನ್ನು ಪೊಲೀಸ್ ಅಧೀಕ್ಷಕರ, ಉಪವಿಭಾಗಾಧಿಕಾರಿ, ಕೆಆರ್‌ಡಿಸಿಎಲ್ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ, ತಾತ್ಕಾಲಿಕವಾಗಿ ಮುಂದೂಡಿ, ಒಂದು ತಿಂಗಳ ಕಾಲಾವಕಾಶ ಪಡೆದು ಮತ್ತೆ ಸಭೆ ಸೇರಿ ಚರ್ಚಿಸಲು ತೀರ್ಮಾನಿಸಲಾಗಿತ್ತು. ಆದರೆ ಶುಕ್ರವಾರ ಏಕಾಎಕಿ ಟೋಲ್ ಸಂಗ್ರಹಣೆ ಪ್ರಾರಂಭಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಯಾವುದೇ ಕೈಗಾರಿಕೆಗಳಿಲ್ಲದ, ಹಳ್ಳಿಗಳನ್ನು ಜೋಡಿಸುವ, ರೈತ ಸಂಪರ್ಕ ಹಿರೇಬಾಗೇವಾಡಿ, ಸವದತ್ತಿ ರಸ್ತೆಗೆ ಎರಡು ಟೋಲ್ ನಿರ್ಮಿಸುವ ಮೂಲಕ ಈ ಭಾಗದ ಜನರ ಜೇಬಿಗೆ ಕತ್ತರಿ ಹಾಕುವುದು ಸರಿಯಲ್ಲ, ಕೊಲ್ಲಾಪುರದಲ್ಲಿ ಟೋಲ್ ಕಿತ್ತು ಹಾಕಿದ ಘಟನೆ ಬೈಲಹೊಂಗಲದಲ್ಲಿ ಸಂಭವಿಸುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು ಎಂದು ಪ್ರತಿಭಟಣಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಗ್ರೇಡ್2 ತಹಶೀಲ್ದಾರ್ ಮಂಜುನಾಥ ಮುನವಳ್ಳಿ ಅವರಿಗೆ ಪ್ರತಿಭಟಣಾಕಾರರು ಬೈಲಹೊಂಗಲ ಪಾಸಿಂಗ್ ವಾಹನಗಳಿಗೆ ಟೋಲ್‌ದಿಂದ ಮುಕ್ತ ಮಾಡಬೇಕು. ಈ ಕುರಿತು ತೀರ್ಮಾನವಾಗುವವರೆಗೂ ಟೋಲ್ ಸಂಗ್ರಹ ಬಂದ್ ಮಾಡಬೇಕು ಎಂದು ಒತ್ತಾಯಿಸಿದರು. ಮಂಜುನಾಥ ಮುನವಳ್ಳಿ ಅವರು ತಮ್ಮ ಬೇಡಿಕೆಯನ್ನು ಜಿಲ್ಲಾ ಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಲಾಗುವದು ಎಂದು ತಿಳಿಸಿ ಪ್ರತಿಭಟಣಾಕಾರರಿಂದ ಮನವಿ ಪಡೆದ ನಂತರ ಪ್ರತಿಭಟಣೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಫಕೀರಗೌಡ ಸಿದ್ದನಗೌಡರ, ಬಿ.ಎಂ. ಚಿಕ್ಕನಗೌಡರ, ಶಿವಾನಂದ ಕೋಲಕಾರ, ಮಹಾಂತೇಶ ಕಮತ, ಸಂಜಯ ಗಿರೆಪ್ಪಗೌಡರ, ಸುರೇಶ ಹೊಳಿ, ಮಲ್ಲಿಕಾರ್ಜುನ ಕರಡಿಗುದ್ದಿ, ನಾಗನಗೌಡ ಪಾಟೀಲ, ಉಮೇಶ ಗೌರಿ, ವೇಂಕಟೇಶ ದಾಸೋಗ, ಘೊಳಪ್ಪ ಹೊಳಿ, ಈರಣ್ಣ ಹುಬ್ಬಳ್ಳಿ, ಮುನೇರ ಶೇಖ, ಮೋಹನ ವಕ್ಕುಂದ, ದುರ್ಗಾ ಯರಝರ್ವಿ, ಶ್ರೀಪತಿ ಪಠಾಣಿ, ಸೋಮಲಿಂಗ ಕೊಟಗಿ ಇತರರು ಇದ್ದರು.