ತುಮಕೂರು: ಒಳಮೀಸಲಾತಿ ವರ್ಗೀಕರಣ ಸಂಬಂಧ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆಒತ್ತಾಯಿಸಿ ನ್ಯಾ. ಎ.ಜೆ. ಸದಾಶಿವಆಯೋಗ ಜಾರಿ ಹಕ್ಕೋತ್ತಾಯ ಸಮಿತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿಮುಂದೆ ಸೋಮವಾರದಿಂದ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.
ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಸಮಿತಿಯ ಪದಾಧಿಕಾರಿಗಳು ಒಳಮೀಸಲಾತಿ ವರ್ಗೀಕರಣಕ್ಕಾಗಿ ಎ.ಜೆ. ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯ ಶಿಫಾರಸ್ಸುಗಳನ್ನು ಜಾರಿಗಾಗಿ ಬಹಳ ದಿನದಿಂದ ಹೋರಾಟ ನಡೆಯುತ್ತಲೇ ಇದೆ. ನ್ಯಾಯುಯತ ಬೇಡಿಕೆಗಳಿಗೆ ಯಾವುದೇ ಸರ್ಕಾರ ಸ್ಪಂದನೆ ಮಾಡದಿದ್ದರೆ ಆ ಸಮುದಾಯಗಳಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಆದಷ್ಟು ಬೇಗಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸದಾಶಿವ ಆಯೋಗದ ವರದಿ ಶಿಫಾರಸ್ಸುಗಳನ್ನು ತಕ್ಷಣದಿಂದ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಯಾವುದೇ ರೀತಿಯ ಒಳಸಂಚು, ರಾಜಕೀಯ ಪಕ್ಷಗಳ ಒತ್ತಡಕ್ಕೆ ಯಾರೂ ಕೂಡಾ ಹೆದರಬಾರದು. ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟದ ಅಗತ್ಯತೆ ಇದ್ದೇ ಇರುತ್ತದೆ. ಈ ಹೋರಾಟವನ್ನು ಎಲ್ಲರೂ ಜತೆಗೂಡಿ ಮಾಡೋಣ. ಈ ಅಹೋರಾತ್ರಿ ಧರಣಿಗೆ ನನ್ನ ಬೆಂಬಲ ಸದಾಕಾಲ ಇರುತ್ತದೆ ಎಂದು ತಿಳಿಸಿದರು.
ದಲಿತ ಮುಖಂಡರಾದ ವಾಲೆಚಂದ್ರಯ್ಯ ಮಾತನಾಡಿ, ಒಳಮೀಸಲಾತಿ ವರ್ಗೀಕರಣ ಜಾರಿಯಾಗಬೇಕು. ನಾವು ಈ ದೇಶದ ಮೂಲ ವಾಸಿಗಳು. ನಮಗೆ ಆಗಿರುವ ಅನ್ಯಾಯ ಖಂಡಿಸಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಅಹೋರಾತ್ರಿ ಧರಣಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಮೆಳೆಕಲ್ಲಹಳ್ಳಿ, ಜೆಸಿಬಿ ವೆಂಕಟೇಶ್, ರಾಮಯ್ಯ, ಮೋಹನ್ ಪರಮೇಶ್, ಶಿವರಾಜು, ಬಂಡೆ ಕುಮಾರ್, ಮುನಿರಾಜು, ರಾಮಮೂರ್ತಿ,ಕೆಂಪರಾಜು ಇದ್ದರು.