Advertisement

ರಸ್ತೆಯಲ್ಲಿ ಭತ್ತ ನೆಟ್ಟು ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

05:48 PM Aug 21, 2019 | Team Udayavani |

ಮದ್ದೂರು: ಹದಗೆಟ್ಟಿರುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಸ್ಥಳೀಯ ರೈತರು ಕೆಸರುಗದ್ದೆಯಂತಾಗಿರುವ ರಸ್ತೆಗೆ ಭತ್ತದ ಸಸಿ ನಾಟಿ ಮಾಡುವ ಮೂಲಕ ಮಂಗಳವಾರ ವಿನೂತನ ಪ್ರತಿಭಟನೆ ನಡೆಸಿದರು.

Advertisement

ಮದ್ದೂರು-ದೇಶಹಳ್ಳಿ-ವಳಗೆರೆಹಳ್ಳಿ ಸಂಪರ್ಕ ಕಲ್ಪಿಸುವ ರಸ್ತೆಯು ಕೆಸರುಗದ್ದೆಯಂತಾಗಿದ್ದು ಕಾವೇರಿ ನೀರಾವರಿ ನಿಗಮದ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಕ್ರಮ ವಹಿಸದ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿದರು.

ಅವ್ಯವಸ್ಥೆಯ ರಸ್ತೆಯಲ್ಲಿ ಜಮಾಯಿಸಿದ ಸ್ಥಳೀಯ ರೈತರು ಚುನಾಯಿತ ಪ್ರತಿನಿಧಿಗಳೂ ಸೇರಿದಂತೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕೂಡಲೇ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿದರು.

ರಸ್ತೆಗಳ ಅವ್ಯವಸ್ಥೆ: ಈ ಮಾರ್ಗದ ರಸ್ತೆಯಲ್ಲಿ ಸ್ಥಳೀಯ ರೈತರು, ಸಾರ್ವಜನಿಕರು, ಹಾಗೂ ದೇಶಹಳ್ಳಿ-ವಳಗೆರೆಹಳ್ಳಿ ಗ್ರಾಮಸ್ಥರು ಪ್ರತಿನಿತ್ಯ ಸಂಚರಿಸುತ್ತಿದ್ದು, ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಯಲ್ಲಿ ಸಂಚರಿಸದಂತಹ ದುಸ್ಥಿತಿ ನಿರ್ಮಾಣಗೊಂಡಿದೆ ಎಂದು ದೂರಿದರು.

ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಸವಾರರು ಹರಸಾಹಸ ಪಡಬೇಕಾದ ಸ್ಥಿತಿ ಬಂದೊದಗಿದ್ದು ವ್ಯವಸಾಯ ಮಾಡಲು ತಮ್ಮ ಜಮೀನುಗಳಿಗೆ ತೆರಳುವ ರೈತರು ಬಿದ್ದು ಗಾಯಗೊಂಡಿರುವ ಉದಾಹರಣೆಗಳು ಸಾಕಷ್ಟಿuದ್ದರೂ ಇಲಾಖೆ ಅಧಿಕಾರಿಗಳು ಇತ್ತ ಗಮಹರಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಅಧಿಕಾರಿಗಳ ನಿರ್ಲಕ್ಷ್ಯ: ಸರ್ಕಾರ ರಸ್ತೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಹಣ ಬಿಡುಗಡೆಗೊಳಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಾಲಾ ಸಂಪರ್ಕ ಕಲ್ಪಿಸುವ ರಸ್ತೆಗಳು ಅದ್ವಾನಗೊಂಡಿವೆ. ಆಳೆತ್ತರದ ಗುಂಡಿಗಳು, ಗಿಡಗಂಟೆಗಳು, ಬೆಳೆದು ನಿಂತು ಸಂಚಾರಕ್ಕೆ ಅನಾನುಕೂಲ ತಂದೊಡ್ಡಿದ್ದರೂ ಅಧಿಕಾರಿಗಳು ಕಂಡೂ ಕಾಣದಂತೆ ದಿನದೂಡುತ್ತಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.

ವಾರದ ಗಡುವು: ಒಂದು ವಾರದೊಳಗಾಗಿ ರಸ್ತೆ ದುರಸ್ತಿ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸದಿದ್ದಲ್ಲಿ ಸ್ಥಳೀಯ ರೈತರೊಂದಿಗೆ ತಾಲೂಕು ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳುವ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸ್ಥಳೀಯ ರೈತರಾದ ಕರಿಯಪ್ಪ, ಶ್ರೀನಿವಾಸ್‌, ರಾಜಣ್ಣ, ತಗಡಯ್ಯ, ಬೊಮ್ಮಯ್ಯ, ಸುನೀಲ್ಕುಮಾರ್‌, ರಾಮಣ್ಣ, ಪ್ರದೀಪ್‌ಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next