Advertisement

ಅಕ್ರಮ ಸಾಗುವಳಿ ಭೂಮಿ ತೆರವಿಗೆ ಆಗ್ರಹಿಸಿ ಧರಣಿ

03:55 PM Jan 02, 2020 | Naveen |

ಸೊರಬ: ಸ್ಮಶಾನ ಭೂಮಿಯಲ್ಲಿ ಅನಧಿಕೃತ ಸಾಗುವಳಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಕೋಡಕನಕಟ್ಟೆ ಗ್ರಾಮಸ್ಥರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯ ನೇತೃತ್ವ ವಹಿಸಿದ ಹೊಸಬಾಳೆ ಗ್ರಾಪಂ ಸದಸ್ಯ ಕೆ.ವಿ. ಸತ್ಯನಾರಾಯಣ ಮಾತನಾಡಿ, ಗ್ರಾಮದ ಸರ್ವೆ ನಂ. 31ರ 6 ಎಕರೆ ಜಾಗವನ್ನು ಸ್ಮಶಾನವನ್ನಾಗಿ ತಲೆ ತಲಾಂತರದಿಂದ ಗ್ರಾಮಸ್ಥರು ಉಪಯೋಗಿಸುತ್ತಿದ್ದರು.

ಹೊಸಬಾಳೆ ಗ್ರಾಪಂನಲ್ಲೂ ಮುಕ್ತಿಧಾಮ ಹೆಸರಿನಲ್ಲಿ ಅಭಿವೃದ್ಧಿಪಡಿಸಲು ಈ ಹಿಂದೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಹೊಸಬಾಳೆಯ ನಿವಾಸಿಯೊಬ್ಬರು ಫಾರಂ. 53ನ್ನು ಇದೇ ಜಾಗಕ್ಕೆ ಸಲ್ಲಿದ್ದು, 2004-05ರಲ್ಲಿ ಸಾಗುವಳಿ ಮಾಡಲು ಪ್ರಯತ್ನಿಸಿದಾಗ ತಡೆ ಹಿಡಿದು, ಸ್ಮಶಾನ ಭೂಮಿಗೆ ಮಂಜೂರು ಮಾಡುವಂತೆ ತಹಶೀಲ್ದಾರ್‌ ಅವರಿಗೆ ಮನವಿ ಸಲ್ಲಿಸಲಾಗಿತ್ತು ಎಂದರು.

ಇತ್ತೀಚೆಗೆ ಗ್ರಾಮದ ವ್ಯಕ್ತಿಯೊಬ್ಬರು ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾರೆ. ಇದಕ್ಕೆ ಅಧಿಕಾರಿಗಳ ಕುಮ್ಮಕ್ಕಿದೆ ಎಂದು ಗಂಭೀರ
ಆರೋಪ ಮಾಡಿದರು. ಇದಲ್ಲದೆ, ಗ್ರಾಮಸ್ಥರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಬೆದರಿಕೆಯನ್ನೂ ಹಾಕಲಾಗಿತ್ತು. ಸ್ಮಶಾನ ಭೂಮಿಯನ್ನು ಪರಭಾರೆ ಮಾಡಬಾರದು ಎಂದು ಆಗ್ರಹಿಸಿ ಸ್ಥಳೀಯ ತಹಶೀಲ್ದಾರ್‌ ಅವರಿಗೆ ನಾಲ್ಕೈದು ಭಾರಿ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನವಾಗಿಲ್ಲ. ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಕೇಳಿದರೂ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಕೂಡಲೇ ಗ್ರಾಮದ ಸರ್ವೆ ನಂ. 31ರ ಜಮೀನನಲ್ಲಿ ಅನಧಿಕೃತ ಸಾಗುವಳಿ ತೆರವುಗೊಳಿಸಿ, ಸ್ಮಶಾನಕ್ಕೆ ಕಾಯ್ದಿರಿಸಬೇಕು ಮತ್ತು ಅನಧಿಕೃತ ದಾಖಲೆಗಳನ್ನು ಸೃಷ್ಟಿಸಿದ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದ ಗ್ರಾಮಸ್ಥರು, ಸ್ಥಳಕ್ಕೆ ಜಿಲ್ಲಾಧಿಕಾರಿ
ಆಗಮಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.

Advertisement

ಗ್ರಾಪಂ ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ಪದ್ಮಶ್ರೀ, ಸದಸ್ಯ ಜಿ.ವೈ. ಪ್ರಸಾದ್‌, ಗ್ರಾಮಸ್ಥರಾದ ಕೆ.ಟಿ. ಶಿವಾನಂದ, ಸತೀಶ್‌ ಆಚಾರಿ, ಕೃಷ್ಣಮೂರ್ತಿ ಭಟ್‌, ನಾಗರಾಜ ಪಟೇಲ್‌, ಅಶೋಕ ಮೇಸ್ತ್ರಿ, ರಘು ನಾಡಿಗ್‌, ಉದಯ್‌ ಸೇರಿದಂತೆ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸ್ಥಳಕ್ಕೆ ಎ.ಸಿ. ಭೇಟಿ: ಪ್ರತಿಭಟನಾ ಸ್ಥಳಕ್ಕೆ ಸಾಗರ ಉಪ ವಿಭಾಗಾಧಿ ಕಾರಿ ನಾಗರಾಜ್‌ ಧರಣಿ ನಿರತರ ಅಹವಾಲನ್ನು ಸ್ವೀಕರಿಸಿ, ಕೋಡನಕಟ್ಟೆ ಗ್ರಾಮದಲ್ಲಿನ ವಿವಾದಿತ ಜಾಗದ ಕುರಿತು ಸಂಬಂಧಪಟ್ಟವರಿಂದ ವರದಿ ತರಿಸಿಕೊಳ್ಳಲಾಗುವುದು. ಶೀಘ್ರದಲ್ಲಿಯೇ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಸದ್ಯ ಸ್ಥಳದಲ್ಲಿ ನಾಮಫಲಕವನ್ನು ಅಳವಡಿಸಲು ಸೂಚನೆ ನೀಡಲಾಗುವುದು ಎಂದು ತಿಳಿಸಿದರು. ತಹಶೀಲ್ದಾರ್‌ ಪಟ್ಟರಾಜ ಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next