ಚನ್ನಪಟ್ಟಣ: ತಾಲೂಕಿನ ಇಗ್ಗಲೂರು ಅಣೆಕಟ್ಟು ಪ್ರದೇಶದಲ್ಲಿ ದಿನಗೂಲಿ ನೌಕರರಾಗಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ 5 ತಿಂಗಳಾದರೂ ವೇತನ ಪಾವತಿ ಮಾಡದ ಹಿನ್ನಲೆಯಲ್ಲಿ ಕಾವೇರಿ ನೀರಾವರಿ ನಿಗಮದ ವಿರುದ್ಧ ಕಚೇರಿ ಎದುರು ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು.
ಕೆಲ ವರ್ಷಗಳಿಂದ ಇಗ್ಗಲೂರು ಡ್ಯಾಂ ಬಳಿಯ ಅಣೆಕಟ್ಟು ಪ್ರದೇಶದಲ್ಲಿ ದಿನಗೂಲಿ ನೌಕರರಾಗಿರುವ ಸುಮಾರು 30 ಮಂದಿ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದಾರೆ. ಇವರನ್ನೇ ನಂಬಿರುವ ಕುಟುಂಬ ಬೀದಿ ಪಾಲಾಗುವ ಆತಂಕದಲ್ಲಿ ಜೀವನ ಮಾಡುವ ಪರಿಸ್ಥಿತಿ ಎದುರಾಗಿದೆ.
ಸೌಲಭ್ಯ ನೀಡದೇ ವಂಚನೆ: ಇಲಾಖೆ ನೀಡುವ ಅಲ್ಪ ಸಂಬಳವನ್ನೇ 5 ತಿಂಗಳಾದರೂ ನೀಡದೆ ಮೀನಮೇಷ ಎಣಿಸುತ್ತಿರುವ ಇಲಾಖೆಯ ವರ್ತನೆಯಿಂದ ದಿನಗೂಲಿ ನೌಕರರು ಹೈರಾಣಾಗಿದ್ದಾರೆ. ಇಲಾಖೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಮಗೆ ಸರ್ಕಾರದಿಂದ ನೀಡುವ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡದೇ ವಂಚನೆ ಮಾಡುತ್ತಿದೆ ಎಂದು ಪ್ರತಿಭಟ ನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನೌಕರರ ಸಮಸ್ಯೆ ಪರಿಹಾರಕ್ಕೆ ಭರವಸೆ: ಈ ಸಂದರ್ಭದಲ್ಲಿ ದಿನಗೂಲಿ ನೌಕರರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು, ನೌಕರರ ಸಮಸ್ಯೆಯನ್ನು ಆಲಿಸಿ ಸದ್ಯದಲ್ಲೇ ನೌಕರರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಪರಿಣಾಮ ತಮ್ಮ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.
ಪ್ರತಿಭಟನೆಯಲ್ಲಿ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಹಾಗೂ ಹಲವು ಮಂದಿ ಪದಾಧಿಕಾರಿಗಳು ಹಾಜರಿದ್ದರು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಕ್ಕೂರು ಪೊಲೀಸ್ ಠಾಣೆಯ ಪಿಎಸ್‌ಐ ಭಾಸ್ಕರ್ ಹಾಗೂ ಸಿಬ್ಬಂದಿ ಎಚ್ಚರವಹಿಸಿದ್ದರು.