Advertisement

ಮೈಷುಗರ್‌ ಕಾರ್ಖಾನೆ ಆರಂಭಕ್ಕೆ ಒತ್ತಾಯ

02:28 PM Sep 04, 2020 | Suhan S |

ಮಂಡ್ಯ: ಮೈಷುಗರ್‌ ಕಾರ್ಖಾನೆಯನ್ನು ಒ ಅಂಡ್‌ ಎಂಗೆ ವಹಿಸುವ ಮೂಲಕ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಮೈಷುಗರ್‌ ಕಬ್ಬು ಬೆಳೆಗಾರರ ಒಕ್ಕೂಟ ವತಿಯಿಂದ ರೈತರು ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.

Advertisement

ಮೈಷುಗರ್‌ ಕಾರ್ಖಾನೆ ವ್ಯಾಪ್ತಿಯಲ್ಲಿ 10 ಲಕ್ಷ ಟನ್‌ ಕಬ್ಬು ಇದ್ದು, ಕಟಾವಿನ ಅವಧಿ ಮೀರುತ್ತಿದೆ. ಇದರಿಂದರೈತರು ನಷ್ಟ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.  ಕಳೆದ ಬಾರಿ ಕಾರ್ಖಾನೆ ಆರಂಭವಾಗದ ಹಿನ್ನೆಲೆಯಲ್ಲಿ ಸಾಕಷ್ಟು ಸಂಕಷ್ಟ ಅನುಭವಿ ಸಿದ್ದಾರೆ. ಈ ಬಾರಿಯೂ ಇದು ಮುಂದುವರಿದರೆ ರೈತರ ಆತ್ಮಹತ್ಯೆ ಹೆಚ್ಚಾಗಲಿದೆ ಎಂದು ಅಳಲು ತೋಡಿಕೊಂಡರು.

ಸಾಲದ ಸುಳಿಗೆ: ಜುಲೈ, ಆಗಸ್ಟ್‌ ತಿಂಗಳಿಗೆ ಸಾಕಷ್ಟು ಕಬ್ಬು ಅವಧಿ ಮೀರಿದೆ. ಇನ್ನೂ ಕಟಾವು ಮಾಡದೆ ಇದ್ದರೆ ನಷ್ಟವಾಗಿ ರೈತರು ಸಾಲದ ಸುಳಿಗೆ ಸಿಲುಕಲಿದ್ದಾರೆ. ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಜಿಲ್ಲೆಯ ಮಗನಾಗಿದ್ದು, ಸಕ್ಕರೆ ನಗರ ಎಂಬ ಹೆಸರನ್ನು ಚಿರಸ್ಥಾಯಿ ಯಾಗಿ ಉಳಿಸಲು ಮೈಷುಗರ್‌ ಕಾರ್ಖಾನೆಯನ್ನು ಒ ಅಂಡ್‌ ಎಂ ಮೂಲಕ ಪ್ರಾರಂಭಿಸಿ ರೈತರನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.

ಮನವಿಗೆ ಸಿಎಂ ಸ್ಪಂದನೆ: ಪ್ರತಿಭಟನೆಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಇನ್ನೊಂದು ವಾರದೊಳಗೆ ಸೂಕ್ತ ನಿರ್ಧಾರ ಕೈಗೊಂಡು ಕಾರ್ಖಾನೆ ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು ಎಂದು ಒಕ್ಕೂಟದ ಅಧ್ಯಕ್ಷ ಸಾತನೂರು ವೇಣುಗೋಪಾಲ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಸ್‌. ಕೃಷ್ಣಕೀಲಾರ, ಉಪಾಧ್ಯಕ್ಷ ಸಂಪಳ್ಳಿ ಶಿವಶಂಕರ್‌, ಎಂ.ಇ.ಚಂದ್ರಶೇಖರ್‌ ಮಲ್ಲಿಗೆರೆ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next