ಧಾರವಾಡ: ಕುಮಾರೇಶ್ವರ ನಗರದ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹೆಚ್ಚಿನ ಸಹಾಯ ಹಾಗೂ ಕಟ್ಟಡ ಕುಸಿತದ ಪ್ರಕರಣದ ತನಿಖೆಯನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಂದ ನಡೆಸುವಂತೆ ಆಗ್ರಹಿಸಿ ಮೃತರ ಕುಟುಂಬಸ್ಥರು ಹಾಗೂ ಗಾಯಾಳುಗಳು ನಗರದ ಡಿಸಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಕಟ್ಟಡ ದುರಂತದ ತನಿಖೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಂಠಿತಗೊಂಡಿದ್ದು, ಶೀಘ್ರವಾಗಿ ನಡೆಸಲು ಉಚ್ಚನ್ಯಾಯಾಲಯದ ನ್ಯಾಯಾಧೀಶರಿಗೆ ತನಿಖೆಯನ್ನು ವರ್ಗಾವಣೆ ಮಾಡಿ, ಸೂಕ್ತ ನಿಯಮಾವಳಿ ರೂಪಿಸಿಬೇಕು ಎಂದು ಆಗ್ರಹಿಸಿದರು.
ಕಟ್ಟಡ ದುರಂತದಲ್ಲಿ 19 ಜನರು ಪ್ರಾಣ ಕಳೆದುಕೊಂಡು 57 ಜನ ಬದುಕಿದ್ದರು. ಆದರೆ, ಬದುಕಿದವರಲ್ಲಿ ಸಾಕಷ್ಟು ಜನರಿಗೆ ತೀವ್ರ ಸ್ವರೂಪದ ಗಾಯಾಗಳಾಗಿವೆ. ಅಲ್ಲದೇ ಮೃತರಲ್ಲಿ ಭಾಗಶಃ ಜನರು ಕೂಲಿ ಕಾರ್ಮಿಕರಾಗಿದ್ದು, ಸಂಪೂರ್ಣ ಮನೆಯ ಜವಾಬ್ದಾರಿ ಮೃತರೇ ಹೊತ್ತಿದ್ದರು. ಈಗ ಮೃತರ ಕುಟುಂಬಗಳು ಜೀವನ ನಡೆಸುವುದು ಕಷ್ಟವಾಗಿ ಬೀದಿಗೆ ಬೀಳುವಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.
ಜಿಲ್ಲಾಡಳಿತ ಹಾಗೂ ಪಾಲಿಕೆ ತಲಾ 2 ಲಕ್ಷ ಸೇರಿದಂತೆ ಒಟ್ಟು 4 ಲಕ್ಷ ಪರಿಹಾರ ಧನ ಪಡೆದಿರುವ ಕುಟುಂಬಗಳು ಸಾಲದ ಬಡ್ಡಿಹಣವನ್ನೂ ಕೂಡ ತುಂಬಲು ಸಾಧ್ಯವಿಲ್ಲ. 57 ಜನ ಗಾಯಾಳುಗಳಲ್ಲಿ 8 ಜನರಿಗೆ ಮಾತ್ರ ಹು-ಧಾ ಪಾಲಿಕೆಯಿಂದ 1 ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಉಳಿದ ಜನರಿಗೆ ಪರಿಹಾರ ನೀಡಿಲ್ಲ. ಘಟನೆಯಲ್ಲಿ ಗಾಯಾಳುಗಳಿಗೆ ಜಿಲ್ಲಾಡಳಿತ ಹಾಗೂ ಖಾಸಗಿ ಆಸ್ಪತ್ರೆಗಳು ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಭರವಸೆ ನೀಡಿತ್ತು. ಆದರೆ, ಆಸ್ಪತ್ರೆಗಳು ಮಾತ್ರ ಗಾಯಾಳುಗಳಿಂದಲೇ ಆಸ್ಪತ್ರೆ ವೆಚ್ಚ ಭರಿಸಿಕೊಳ್ಳುವ ಮೂಲಕ ಗಾಯಾಳುಗಳಿಗೆ ಮತ್ತಷ್ಟು ಹೊರೆ ಮಾಡಿದ್ದು, ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ ಎಂದು ದೂರಿದರು.
ಕಟ್ಟಡದಲ್ಲಿ ಮಳಿಗೆಗಳನ್ನು ಖರೀದಿಸಿರುವ ಮಾಲೀಕರಿಗೆ ರೇರಾ ಕಾಯ್ದೆಯಡಿ ಪರಿಹಾರ ನೀಡಬೇಕು. ಬಾಡಿಗೆ ಆಧಾರದ ಮೇಲೆ ಮಳಿಗೆಗಳನ್ನು ತೆಗೆದುಕೊಂಡು ಬಂಡವಾಳ ಹೂಡಿಕೆ ಮಾಡಿ, ವ್ಯಾಪಾರ ಮಾಡುತ್ತಿದ್ದವರಿಗೂ ಸರಕಾರ ಪರಿಹಾರ ನೀಡಬೇಕು. ರಾಜ್ಯ ಸರಕಾರ ಮೃತರ ಕುಟುಂಬಗಳಿಗೆ 25 ಲಕ್ಷ ಹಾಗೂ ಗಾಯಾಳುಗಳಿಗೆ ಗಾಯದ ತೀವ್ರತೆಯ ಆಧಾರದ ಮೇಲೆ 2-10 ಲಕ್ಷದ ವರೆಗೆ ಪರಿಹಾರ ನೀಡಬೇಕು ಎಂದರು.