ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ ರೈಲ್ವೆ ಇಲಾಖೆ ಹುದ್ದೆಗಳಲ್ಲಿ ಕನ್ನಡಿಗರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಮಹಾರಾಷ್ಟ್ರ ಮಾದರಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿ ರೈಲ್ವೆ ಸಿಸಿಎಎ ತರಬೇತುದಾರರು ಸೋಮವಾರ ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು ಪ್ರತಿಭಟಿಸಿದರು.
ಸಿಸಿಎಎ ತರಬೇತುದಾರರು ಬಿಜೆಪಿ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದರು. ಆದರೆ ಅದಕ್ಕೆ ಅವಕಾಶ ನೀಡದ ಪೊಲೀಸರು, ಪ್ರತಿಭಟನಾನಿರತರನ್ನು ವಶಕ್ಕೆ ಪಡೆದರು. ಇದಕ್ಕೂ ಮುನ್ನ, ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೂ ಅವಕಾಶ ಸಿಗಬೇಕು.
ಅದಕ್ಕಾಗಿ ಮಹಾರಾಷ್ಟ್ರ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ರೈಲ್ವೆ ಸಚಿವರು ಕ್ರಮ ಕೈಗೊಳ್ಳಬೇಕಿದ್ದು, ಅದಕ್ಕಾಗಿ ರಾಜ್ಯದ ಸಂಸದರು ಒತ್ತಡ ಹೇರಬೇಕು ಎಂದು ಆಗ್ರಹಿಸಿ ಸಿಸಿಎಎ ತರಬೇತುದಾರರು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ಆರಂಭಿಸಿದರು.
ಬಿಎಸ್‌ವೈ ಮಾತುಕತೆ: ಪ್ರತಿಭಟನಾಕಾರರೊಂಗಿಗೆ ಮಾತುಕತೆ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬೇಡಿಕೆಗಳ ಬಗ್ಗೆ ಕೇಂದ್ರದ ನಾಯಕರ ಜತೆ ಚರ್ಚಿಸುವುದಾಗಿ ಭರವಸೆ ನೀಡಿದರು. ಆದರೆ, ಪಟ್ಟು ಬಿಡದ ಪ್ರತಿಭಟನಾಕಾರರು ಯಡಿಯೂರಪ್ಪ ಮಾತಿಗೆ ವಿರೋಧ ವ್ಯಕ್ತಪಡಿಸಿದರಲ್ಲದೆ, ನ್ಯಾಯ ಸಿಗುವವರೆಗೆ ಇಲ್ಲಿಯೇ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಣೆ ಕೂಗಿದರು.
ಇದರಿಂದ ಸಿಟ್ಟಾದ ಯಡಿಯೂರಪ್ಪ, ಭರವಸೆ ನೀಡಿದರೂ ಕೇಳದಿದ್ದರೆ ಏನು ಮಾಡೋಣ. ಸರಿ ಇಲ್ಲೇ ಕುಳಿತುಕೊಳ್ಳಿ ಎಂದು ಹೇಳಿ ಪಕ್ಷದ ಕಚೇರಿಯೊಳಗೆ ತೆರಳಿದರು. ಸ್ವಲ್ಪ ಸಮಯದ ನಂತರ ಮತ್ತೆ ಪ್ರತಿಭಟನಾಕರರ ಬಳಿ ಬಂದ ಯಡಿಯೂರಪ್ಪ, ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಹೆಚ್ಚು ಅವಕಾಶ ನೀಡುವ ಕುರಿತು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಜತೆ ಈಗಾಗಲೇ ಎರಡು ಬಾರಿ ಮಾತುಕತೆ ನಡೆಸಿ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಕೋರಿದ್ದೇನೆ.
ಮತ್ತೂಮ್ಮೆ ಅವರೊಂದಿಗೆ ಈ ಕುರಿತು ಚರ್ಚಿಸುತ್ತೇನೆ ಎಂದು ಭರವಸೆ ನೀಡಿ ವಾಪಸಾದರು. ಆಗಲೂ ಪ್ರತಿಭಟನಾಕಾರರು ಧರಣಿ ಹಿಂತೆಗೆದುಕೊಳ್ಳಲು ಒಪ್ಪದೆ, ಘೋಷಣೆ ಕೂಗಿದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಪ್ರತಿಭಟನಾಕಾರರು ಪೆನಾಯಿಲ್ ಬಾಟಲ್ ಹಿಡಿದಿದ್ದನ್ನು ಗಮನಿಸಿದ ಪೊಲೀಸರು ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡರು.