ಕಲಬುರಗಿ: ಗ್ರಾಮ ಪಂಚಾಯಿತಿ ಗಲಾಟೆಯಲ್ಲಿ ತಾಯಿಯೊಂದಿಗೆ ಜೈಲು ಸೇರಿದ್ದ ಬಾಲಕಿ ಸಾವು ಖಂಡಿಸಿ ಮತ್ತು ಬಾಲಕಿ ಸಾವಿಗೆ ಜೇವರ್ಗಿ ಪಿಎಸ್ಐ ಕಾರಣ ಎಂದು ಆರೋಪಿಸಿ ರವಿವಾರ ಮಧ್ಯಾಹ್ನದಿಂದ ಆರಂಭವಾಗಿದ್ದ ಪ್ರತಿಭಟನೆ ತಡರಾತ್ರಿ ಅಂತ್ಯವಾಯಿತು. ಬಾಲಕಿ ಸಾವಿನ ಬಗ್ಗೆ 24 ಗಂಟೆಯೊಳಗೆ ತನಿಖೆ ಮುಗಿಸಿ, ಕ್ರಮಕೈಗೊಳ್ಳುವುದಾಗಿ ಡಿಸಿ ಜ್ಯೋತ್ಸ್ನಾ ಮತ್ತು ಎಸ್ಪಿ ಸಿಮಿ ಮರಿಯಂ ಜಾರ್ಜ್ ಭರವಸೆ ನಂತರ ಅಹೋರಾತ್ರಿ ಧರಣಿ ಕೈಬಿಡಲಾಯಿತು.
ನಗರದ ಜಿಮ್ಸ್ ಆಸ್ಪತ್ರೆ ಮುಂಭಾಗದಲ್ಲಿ ಮುಖ್ಯ ರಸ್ತೆಯಲ್ಲಿ ಮೂರು ವರ್ಷದ ಬಾಲಕಿ ಭಾರತಿ ಮೃತದೇಹವಿಟ್ಟು, ಬಾಲಕಿ ಸಾವಿಗೆ ಕಾರಣವಾದ ಜೇವರ್ಗಿ ಪಿಎಸ್ಐ ಮಂಜುನಾಥ ಹೂಗಾರ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಕುಟುಂಬದವರು ಮಧ್ಯಾಹ್ನ 1.30ಕ್ಕೆ ಧರಣಿ ಕೈಗೊಂಡಿದ್ದರು.
ಧರಣಿಯಲ್ಲಿ ಜೇವರ್ಗಿ ಶಾಸಕ ಡಾ.ಅಜಯ್ ಸಿಂಗ್, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕರಾದ ಬಿ.ಆರ್.ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಅಲ್ಲಮಪ್ರಭು ಪಾಟೀಲ್ ಹಾಗೂ ಕೋಲಿ ಸಮಾಜದ ಮುಖಂಡರು ಪಾಲ್ಗೊಂಡು, ಪಿಎಸ್ಐ ಅವರನ್ನು ಅಮಾನತು ಮಾಡಲೇಬೇಕೆಂದು ಪಟ್ಟು ಹಿಡಿದಿದ್ದರು. ಆದರೆ, ಪ್ರಕರಣ ತನಿಖೆಗೆ ವಹಿಸಲಾಗಿದ್ದು, ತನಿಖೆ ನಂತರ ಕ್ರಮ ಜರುಗಿಸುವಾಗಿ ಎಸ್ಪಿ ಅವರು ವಾದ ಮಾಡಿದರು.
ಇದನ್ನೂ ಓದಿ:ಟೋಲ್ ಕೇಳಿದ ಸಿಬ್ಬಂದಿ ಮೇಲೆ ಕಿಡಿಗೇಡಿಗಳಿಂದ ಹಲ್ಲೆ :ಘಟನೆಯ ದೃಶ್ಯ CCTVಯಲ್ಲಿ ಸೆರೆ
ಇದರಿಂದ ಧರಣಿ ಕಾವು ಹೆಚ್ಚಾಗಿತ್ತು. ರಾತ್ತಿ 8 ಗಂಟೆಗೆ ಸ್ಥಳಕ್ಕೆ ಡಿಸಿ ಆಗಮಿಸಿ ಹಲವು ಸುತ್ತಿನ ಮಾತುಕತೆ ನಡೆಸಿದರೂ ಸಂಧಾನ ಸಫಲವಾಗಲಿಲ್ಲ. ಹೀಗಾಗಿ ಅಹೋರಾತ್ರಿ ಧರಣಿ ಕೈಗೊಳ್ಳಲು ಮುಖಂಡರು ಮುಂದಾದರು. ಬೆಡ್, ಹಾಸಿಗೆಗಳನ್ನು ತಂದು ಧರಣಿ ಮುಂದುವರೆಸಿದರು. ನಂತರ ರಾತ್ರಿ 11.30ಕ್ಕೆ ಡಿಸಿ-ಎಸ್ಪಿ ಮಾತುಕತೆ ನಡೆಸಿ, 24 ಗಂಟೆಯೊಳಗೆ ತನಿಖೆ ಪೂರ್ಣಗೊಳಿಸಲಾಗುತ್ತದೆ. ತಪ್ಪಿಸ್ಥರ ವಿರುದ್ದ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಇದರಿಂದ ಧರಣಿ ಕೈಬಿಡಲಾಯಿತು.