ಬೇಲೂರು: ತಾಲೂಕು ಕೇಂದ್ರ ಸೆಸ್ಕ್ ಕಚೇರಿಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇಲ್ಲದೆ ಉಪ ವಿದ್ಯುತ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ತಮ್ಮ ಕೆಲಸದ ಬಗ್ಗೆ ನಿರ್ಲಕ್ಷ್ಯತೋರುತ್ತಿದ್ದು ವಿದ್ಯುತ್ ಸಮಸ್ಯೆಯಿಂದ ನಾಗರಿಕರು ಪರದಾಡುವಂತಾಗಿದೆ ಎಂದುಆರೋಪಿಸಿ ಸೆಸ್ಕ್ ಕಚೇರಿ ಮುಂಬಾಗ ಸಮಾಜ ಸೇವಕ ಕೆ. ಎಸ್. ತೀರ್ಥಪ್ಪ ಏಕಾಂಗಿ ಪ್ರತಿಭಟನೆ ನಡೆಸಿದರು.
ಸೆಸ್ಕ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ 8 ತಿಂಗಳ ಹಿಂದೆ ವರ್ಗ ಮಾಡಲಾಗಿದ್ದು, ಈ ಜಾಗಕ್ಕೆ ಸಕಲೇಶಪುರದ ಎಂಜಿನಿಯರ್ ಅವರನ್ನು ಹಾಕಲಾಗಿದೆ. ಅವರು ವಾರಕ್ಕೆ 3 ದಿನ ಬಂದು ಹೋಗುತ್ತಿದ್ದಾರೆ. ಹೋಬಳಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಸ್ಕ್ ಇಲಾಖೆ ನೌಕರರಿಗೆ ಹೇಳುವವರು ಕೇಳುವವರು ಇಲ್ಲದಂತಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಗ್ರಾಮೀಣ ಪ್ರದೇಶದ ಜನತೆ ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿದ್ದಾರೆಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದೆಡೆ ಆನೆ ಗಲಾಟೆಯಿಂದ ರಾತ್ರಿ ವೇಳೆ ವಿದ್ಯುತ್ತಿಲ್ಲದೆ ಮನೆಯಿಂದ ಹೊರಗೆಬರದಂತಾಗಿದೆ. ವಿದ್ಯುತ್ ಸಮಸ್ಯೆಯಿಂದಾಗಿ ಓವರ್ ಹೆಡ್ ಟ್ಯಾಂಕ್‌ಗಳಿಗೆ ನೀರನ್ನು ಪೂರೈಸಲಾಗದೇ ಕುಡಿವ ನೀರಿಗೆ ಹಾಹಾಕಾರವಿದೆ. ಈಗ ಕಾಫಿ ಪಲ್ಪರ್ ಸಮಯವಾಗಿದ್ದರಿಂದ ವಿದ್ಯುತ್ ಸಮರ್ಪಕವಾಗಿಲ್ಲದೆ ಕಾಫಿ ಬೆಳೆಗಾರರು ಚಿಂತೆ ಗೀಡಾಗಿದ್ದಾರೆ . ಇಷ್ಟೆಲ್ಲ ಸಮಸ್ಯೆ ಇದ್ದರೂ ಶಾಸಕರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಈಗಲಾದರೂ ಶಾಸಕ ಕೆ. ಎಸ್. ಲಿಂಗೇಶ್ ಎಚ್ಚೆತ್ತುಬೇಲೂರಿಗೆ ಕಾರ್ಯಪಾಲಕ ಎಂಜಿನಿಯರ್ ಅವರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ .
ಮಾಜಿ ಶಾಸಕ ಬಿ.ವೈ.ಎನ್ ರುದ್ರೇಶ್‌ಗೌಡರ ಕಾಲದಲ್ಲಿ ಬಿಕ್ಕೋಡು ಹೋಬಳಿ ಕೇಂದ್ರಕ್ಕೆ ಉಪವಿದ್ಯುತ್ ಕೇಂದ್ರ ಮಂಜೂರಾಗಿತ್ತು. ಆದರೆ, ಇದುವರೆಗೂ ಅದರ ಕಾಮಗಾರಿ ಆರಂಭಗೊಂಡಿಲ್ಲ. ಬಿಕ್ಕೋಡು ಹೋಬಳಿ ಕೇಂದ್ರದ ವ್ಯಾಪ್ತಿಯಲ್ಲಿ 123 ಹಳ್ಳಿ ಬರುತ್ತವೆ. ಬೇಕಾಬಿಟ್ಟಿ ವಿದ್ಯುತ್ ಸರಬರಾಜಿನಿಂದ ಗ್ರಾಮೀಣ ಪ್ರದೇಶದ ಜನತೆ ಪರದಾಡುವಂತಾಗಿದೆ. ರೈತರವಿದ್ಯುತ್ ವ್ಯವಸ್ಥೆಯಿರದೆ ದನಕರುಗಳಿಗೆಕುಡಿಯಲು ನೀರು ಇಲ್ಲವಾಗಿದೆ. ರಾತ್ರಿ ವೇಳೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ.ಈಗಲಾದರೂ ಇಂಧನ ಹಾಗೂ ಉಸ್ತುವಾರಿ ಸಚಿವರು ಎಚ್ಚೆತ್ತು ವಿದ್ಯುತ್ ಉಪ ಕೇಂದ್ರಆರಂಭಿಸಿದರೆ ಜನರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದರು.