Advertisement

ವಿವಿಧ ಬೇಡಿಕೆ ಈಡೇರಿಕೆಗಾಗಿ ಪತಿಭಟನೆ

02:00 PM Dec 06, 2019 | Suhan S |

ಚಾಮರಾಜನಗರ: ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ ಕೆಜಿ, ಯುಕೆಜಿ ತರಗತಿ ಆರಂಭಿಸಬೇಕು. ವೇತನ ಬಾಕಿ ನೀಡಬೇಕು. ಮಾತೃಪೂರ್ಣ ಯೋಜನೆ ಯಶಸ್ಸಿಗೆ ಹೆಚ್ಚುವರಿ ಸಹಾಯಕಿಯರನ್ನು ನೇಮಿಸಬೇಕುಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಆಶ್ರಯದಲ್ಲಿ ಅಂಗನವಾಡಿ ನೌಕರರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಮಾರಿಗುಡಿ ಮುಂಭಾಗದಿಂದ ಮೆರವಣಿಗೆ ಆರಂಭಿಸಿದ ಅಂಗನವಾಡಿ ನೌಕರರು, ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು. ಸ್ಥಳಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆಗಮಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌. ನಾರಾಯಣರಾವ್‌ ಆಗಮಿಸಿ ಪ್ರತಿಭಟನಾನಿರತರ ಅಹವಾಲುಗಳನ್ನು ಆಲಿಸಿದರು. ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಸ್ಥಳಕ್ಕೆ ಆಗಮಿಸಬೇಕೆಂದು ಅಂಗನವಾಡಿ ನೌಕರರು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಉಪನಿರ್ದೇಶಕ ಬಸವರಾಜು ಅವರನ್ನುಉದ್ದೇಶಿಸಿ, ನಾಲ್ಕು ತಿಂಗಳಿಂದ ಜಿಲ್ಲೆಯ ಅಂಗನವಾಡಿ ನೌಕರರಿಗೆ ಸಂಬಳವಾಗಿಲ್ಲ. ಮಕ್ಕಳಿಗೆ ವಿತರಿಸುವ ಮೊಟ್ಟೆಗೆ, ಸೊಪ್ಪು, ತರಕಾರಿಗೆ ಇಲಾಖೆಯಿಂದ ಹಣ ಬಿಡುಗಡೆಯಾಗಿಲ್ಲ. ಕೇಂದ್ರಗಳ ಬಾಡಿಗೆ ಹಣ ನೀಡಿಲ್ಲ. ಅಡುಗೆ ಅನಿಲಕ್ಕೆ ಇಲಾಖೆಯಿಂದ ಹಣ ಬಿಡುಗಡೆಯಾಗಿಲ್ಲ. ಅಂಗನವಾಡಿ ಕೇಂದ್ರಗಳನ್ನುನಡೆಸುವುದು ಕಷ್ಟವಾಗಿದೆ ಎಂದು ದೂರು ಹೇಳಿದರು. ಕ್ರಮ ಕೈಗೊಳ್ಳುವುದಾಗಿ ಅಧಿಕಾರಿ ಉತ್ತರಿಸಿದರು.

ಸರ್ಕಾರದ ಎಲ್ಲ ಕ್ಷೇತ್ರ ಖಾಸಗೀಕರಣ: ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಮಾತನಾಡಿ, ಅಂಗನವಾಡಿ ನೌಕರರುಅರೆಕಾಲಿಕೆ ಉದ್ಯೋಗಿಗಳು. ಇಂದು ಉದಾರೀಕರಣ ನೀತಿ ಅನುಸರಿಸುತ್ತಿರುವ ಸರ್ಕಾರ ಎಲ್ಲ ಕ್ಷೇತ್ರಗಳನ್ನೂಖಾಸಗೀಕರಣ ಮಾಡುತ್ತಿದೆ. ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಇರುವ ಯೋಜನೆಗಳನ್ನು ಖಾಸಗಿಗೆ ವಹಿಸುತ್ತಿದೆ. ಇದರಿಂದ ಸಾವಿರಾರು ಮಹಿಳೆಯರು ಕೆಲಸ ಕಳೆದುಕೊಳ್ಳುವುದಲ್ಲದೇ ಐಸಿಡಿಎಸ್‌ ಯೋಜನೆ ತನ್ನ ಉದ್ದೇಶವನ್ನೇ ಕಳೆದುಕೊಳ್ಳಲಿದೆ ಎಂದರು.

ಅಂಗನವಾಡಿಗಳಿಗೆ 4200 ಕೋಟಿ ರೂ. ಖರ್ಚು: ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯಲ್ಲಿ 3ರಿಂದ 8 ವರ್ಷದ ಮಕ್ಕಳ ಶಿಕ್ಷಣವನ್ನು ಶಿಕ್ಷಣ ಇಲಾಖೆಯಡಿ ನೀಡಬೇಕೆಂದು ಶಿಫಾರಸು ಮಾಡಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗಳನ್ನು ಪ್ರಾರಂಭಿಸಲಾಗಿದೆ. ಈ ಶಿಕ್ಷಣವನ್ನು ಈಗಾಗಲೇ ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 4200 ಕೋಟಿ ರೂ.ಗಳನ್ನು ಅಂಗನವಾಡಿಗಳಿಗೆ ಖರ್ಚು ಮಾಡಲಾಗುತ್ತಿದೆ. ಹೀಗಿರುವಾಗ ಮತ್ತೆ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಹೊಸ ತರಗತಿಗಳಿಗೆ ಹಣ ಖರ್ಚು ಮಾಡುತ್ತಿರುವುದು ಸರಿಯಲ್ಲ ಎಂದರು.

Advertisement

10ರಿಂದ ಅನಿರ್ದಿಷ್ಟಾವಧಿ ಹೋರಾಟ: ಡಿ.10ರಿಂದ ಅಂಗನವಾಡಿ ನೌಕರರು ಅನಿರ್ದಿಷ್ಟಾವಧಿಯ ಹೋರಾಟವನ್ನು ನಡೆಸುತ್ತಿದ್ದು, ಬೆಂಗಳೂರಿಗೆ ಪಾದಯಾತ್ರೆ ಮುಖಾಂತರ ತೆರಳಲಿದ್ದಾರೆ. ಅಂಗನವಾಡಿ ಕೇಂದ್ರಗಳು ಹಳೆಯ ರೀತಿಯಲ್ಲೇ ಕಾರ್ಯಾಚರಿಸುತ್ತಿದ್ದು, ಆಧುನಿಕ ಸನ್ನಿವೇಶದಲ್ಲಿ ಅಂಗನವಾಡಿ ಕೇಂದ್ರಗಳು ಮಕ್ಕಳನ್ನು ಆಕರ್ಷಿಸುವ ಕೇಂದ್ರಗಳಾಗಬೇಕು. 3 ಗಂಟೆ ಕಾಲ ಶಾಲಾ ಪೂರ್ವ ಕಲಿಕೆಗೆ ಆದ್ಯತೆ ನೀಡಬೇಕು. ಅಂಗನವಾಡಿ ಕೇಂದ್ರಗಳಿಗೆ ಎಲ್ಲ ರೀತಿಯ ಗುಣಾತ್ಮಕ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಈಗಾಗಲೇ ಶಿಕ್ಷಣ ಇಲಾಖೆಯಿಂದ ಆರಂಭವಾಗಿರುವ, ಆರಂಭವಾಗಲಿರುವ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಬಾರದು. ಅಂಗನವಾಡಿ ನೌಕರರಿಗೇ ತರಬೇತಿ ನೀಡಿ, ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷೆ ಕೆ. ಸುಜಾತಾ, ಪ್ರಧಾನ ಕಾರ್ಯದರ್ಶಿ ನಾಗಮಣಿ, ಖಜಾಂಚಿ ಭಾಗ್ಯ, ರಾಜ್ಯ ಸಂಘದ ಇಂದ್ರಮ್ಮ, ಪ್ರಮೀಳಾ, ಭಾಗೀರತಿ, ಜಿಲ್ಲಾ ಸಮಿತಿಯ ಗುರುಮಲ್ಲಮ್ಮ, ಉಮಾ, ಶಾಂತಮ್ಮ, ಪುಟ್ಟಬಸಮ್ಮ, ಮೀನಾಕ್ಷಿ, ತುಳಸಮ್ಮ, ಮಂಜುಳಾ, ಯಶೋದಮ್ಮ, ಗಿರಿಜಾಂಬಿಕೆ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next