Advertisement

ಬೇಡಿಕೆ ಈಡೇರಿಕೆಗೆ ಧರಣಿ

11:32 AM Dec 13, 2019 | Team Udayavani |

ಬೆಂಗಳೂರು: ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಕಾನೂನು ಜಾರಿ, ಅಂಬೇಡ್ಕರ್‌ ಸ್ಮಾರ್ಟ್‌ ಕಾರ್ಡ್‌ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಸೆಂಟರ್‌ ಆಫ್ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಸದಸ್ಯರು ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಅಸಂಘಟಿತ ಕಾರ್ಮಿಕರು ಕಾಲ್ನಡಿಗೆ ಜಾಥಾ ನಡೆಸಿ, ತಮ್ಮ ಬೇಡಿಕೆ ಪೂರೈಸಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಕಾರ್ಮಿಕ ಇಲಾಖೆ ರೂಪಿಸಿದ ಭವಿಷ್ಯ ನಿಧಿ ಯೋಜನೆ ಅಸಂಘಟಿತ ಕಾರ್ಮಿಕರಿಗೆ ಪೂರಕವಾಗಿದೆ. ಇದನ್ನು ಕೂಡಲೇ ಜಾರಿಗೊಳಿಸಿ 2020ರ ಬಜೆಟ್‌ನಲ್ಲಿ 500 ಕೋಟಿ ರೂ. ಅನುದಾನ ಮೀಸಲಿಡಬೇಕು. ಸ್ಮಾರ್ಟ್‌ ಕಾರ್ಡ್‌ ಮತ್ತು ಗುರುತಿನ ಚೀಟಿ ಪಡೆದಿರುವವರಿಗೆ ಕರ್ನಾಟಕ ಆಯುಷ್ಮಾನ್‌ ಭಾರತ್‌ ಕಾರ್ಡ್‌ಗಳನ್ನು ವಿತರಿಸಬೇಕು. ಪ್ರಧಾನ ಮಂತ್ರಿ ಜೀವನ್‌ ಭೀಮಾ ಯೋಜನೆ ಮತ್ತು ಸುರಕ್ಷಾ ಭೀಮಾ ಯೋಜನೆಯನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ವರ್ಗಾಯಿಸಿ, ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬೀದಿಬದಿ ವ್ಯಾಪಾರಸ್ಥರು, ಹಮಾಲಿ ಕಾರ್ಮಿಕರು, ಮನೆಗೆಲಸ ಮಾಡುವವರು, ಆಟೋ, ಟ್ಯಾಕ್ಸಿ ಚಾಲಕರು ಸೇರಿ ಹಲವು ವಲಯಗಳಲ್ಲಿ ಅಸಂಘಟಿತ ಕಾರ್ಮಿಕರುಕೆಲಸ ಮಾಡುತ್ತಿದ್ದಾರೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಎರಡು ಕೋಟಿಗೂ ಅಧಿಕ ಅಸಂಘಟಿತ ಕಾರ್ಮಿಕರಿದ್ದಾರೆ. ರಾಜ್ಯದ ಒಟ್ಟು ಆದಾಯದಲ್ಲಿ ಶೇ 60ರಷ್ಟು ಕೊಡುಗೆ ಕಾರ್ಮಿಕರದ್ದು. ಆದರೆ, ಕನಿಷ್ಠ ವೇತನ, ಪಿಂಚಣಿ, ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.

ಕಾರ್ಮಿಕರಿಗೆ ಸಾಮಾಜಿಕ ರಕ್ಷಣೆ ಒದಗಿಸುವ ಉದ್ದೇಶದಿಂದ 2009ರಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿ ರಚನೆಯಾಗಿದೆ. ಇದರಂತೆ ಮಕ್ಕಳಿಗೆ ಉಚಿತ ಶಿಕ್ಷಣ, ಅಪಘಾತ ಪರಿಹಾರ, ವಸತಿ ಹಾಗೂ ಪಿಂಚಣಿ ಸೇರಿ ಅನೇಕ ಸೌಲಭ್ಯಗಳು ಸಿಗಬೇಕಿತ್ತು. ಆದರೆ, ಅನುದಾನದ ಕೊರತೆಯ ನೆಪದಲ್ಲಿ ಈ ಸೌಲಭ್ಯ ಈವರೆಗೆ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಯೂನಿಯನ್‌ ಅಧ್ಯಕ್ಷ ಕೆ.ಎನ್‌.ಉಮೇಶ್‌, ಖಜಾಂಚಿ ಬಸಮ್ಮ, ಪ್ರಧಾನ ಕಾರ್ಯದರ್ಶಿ ಸೈಯದ್‌ ಮುಜೀಬ್‌ ಸೇರಿದಂತೆ ಪ್ರಮುಖ ರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next