ಹಾವೇರಿ: ಕನಿಷ್ಠ ಮಾಸಿಕ ಗೌರವ ಧನ, ಬಾಕಿ ಇರುವ ಪ್ರೋತ್ಸಾಹಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಿತಿ ಹಾಗೂ ಎಐಯುಟಿಯುಸಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಬುಧವಾರ ನಗರದ ಜಿಲ್ಲಾಡಳಿತ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಆಶಾ ಕಾರ್ಯಕರ್ತೆಯರು, ಜಿಲ್ಲಾಡಳಿತ ಭವನದ ಎದುರು ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಆರೋಗ್ಯ ಇಲಾಖೆ ಯೋಜನೆ ಹಾಗೂ ಸೇವೆಗಳನ್ನು ಹಳ್ಳಿ ಹಾಗೂ ನಗರ ಪ್ರದೇಶದ ಬೇರುಮಟ್ಟಕ್ಕೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರು ನಿರಂತರಾಗಿ ಶ್ರಮಿಸುತ್ತಿದ್ದಾರೆ. ಗರ್ಭಿಣಿಯರ ಸುರಕ್ಷಿತ ಹೆರಿಗೆ, ಸ್ವಸ್ಥ ಶಿಶುವಿನ ಜನನ, ಆರೈಕೆ ಹಾಗೂ ಪೌಷ್ಠಿಕತೆಯ ಅರಿವು ಮೂಡಿಸಿ ಸಾಂಕ್ರಾಮಿಕ ರೋಗಗಳ ತೆಡೆಗಟ್ಟಲು ಹಗಲಿರುಳು ದುಡಿಯುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಆಶಾ ಕಾರ್ಯಕರ್ತೆಯರಿಗೆ ಸೌಲಭ್ಯಗಳನ್ನು ಕಲ್ಪಿಸದೇ ಶೋಷಣೆ ಮಾಡುತ್ತಿದ್ದು, ಕನಿಷ್ಠ ವೇತನ ಸಹ ನೀಡದೇ ದುಡಿಸಿಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರಾಜ್ಯದಲ್ಲಿ ಕೇಂದ್ರದ ಪ್ರೋತ್ಸಾಹಧನ ನೀಡುವ ಆಶಾ ಸಾಫ್ಟ್ ವೇತನ ಮಾದರಿಯಿಂದ ಆಶಾ ಕಾರ್ಯಕರ್ತೆಯರಿಗೆ ಕಳೆದ ಮೂರು ವರ್ಷಗಳಿಂದ ಆರ್ಥಿಕ ನಷ್ಟವಾಗುತ್ತಿದೆ. ಅಲ್ಲದೇ ರಾಜ್ಯ ಸರ್ಕಾರ ನೀಡುವ 3500 ರೂ. ಗೌರವಧನವನ್ನು ವಿಳಂಬ ಮಾಡಿ ನೀಡುತ್ತಿದ್ದು, ಕಳೆದ 4-5 ತಿಂಗಳಿನಿಂದ ಬಾಕಿ ಇದೆ. ಕಳೆದ 9 ತಿಂಗಳಿನಿಂದ ಕೇಂದ್ರದ ಪ್ರೋತ್ಸಾಹಧನ ಬಾಕಿ ಇದೆ. ಹೊಸ ವೇತನ ವಿಧಾನ ಪದೇ ಪದೇ ಬದಲಾವಣೆ ಮಾಡುತ್ತಿರುವುದರಿಂದ ಆಶಾ ಕಾರ್ಯಕರ್ತೆಯರು ಗೌರವಧನಕ್ಕೂ ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ದೂರಿದ್ದಾರೆ.
ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಿ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ, ಆಶಾ ಕಾರ್ಯಕರ್ತೆಯರು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ನಿವೃತ್ತ ಹೊಂದುವ ಆಶಾಗಳಿಗೆ ಪಿಂಚಣಿ ವ್ಯವಸ್ಥೆ ಕಲ್ಪಿಸಬೇಕು. ಸಾಮಾಜಿಕ ಸುರಕ್ಷಾ ಯೋಜನೆ ವ್ಯಾಪ್ತಿಗೆ ಆಶಾ ಕಾರ್ಯಕರ್ತೆಯರನ್ನು ಸೇರಿಸಿ ಪ್ರಧಾನಮಂತ್ರಿ ಜೀವನಜ್ಯೋತಿ ಯೋಜನೆ ಹಾಗೂ ಸುರಕ್ಷಾ ಬೀಮಾ ಯೋಜನೆ ಕೂಡಲೇ ಜಾರಿಗೊಳಿಸಬೇಕು. ಆಶಾ ಕಾರ್ಯಕರ್ತೆಯರಿಗೆ ಹೆರಿಗೆ ರಜೆಯ ಸೌಲಭ್ಯ ಕಲ್ಪಿಸಬೇಕು. ಪ್ರತಿ ತಿಂಗಳು ವೇತನವನ್ನು ನಿಗದಿತ ದಿನಾಂಕದೊಳಗೆ ಬಿಡುಗಡೆಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಜಿಲ್ಲಾ ಸಲಹೆಗಾರ ಗಂಗಾಧರ ಬಡಿಗೇರ, ಜಿಲ್ಲಾಧ್ಯಕ್ಷೆ ಜಯಶೀಲಾ ಬಂಕಾಪೂರ, ಮುಖಂಡರಾದ ರೂಪಾ ಮಾನೆ, ಮಂಜುಳಾ ಮಾಸೂರ, ವನಜಾಕ್ಷಿ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.