ಬೆಳಗಾವಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘದ ಸದಸ್ಯರು ಸುವರ್ಣವಿಧಾನ ಸೌಧ ಸಮೀಪ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಂಘದ ಅಧ್ಯಕ್ಷ ಎನ್.ಆರ್. ಲಾತೂರ ಮಾತನಾಡಿ, ಜಿಲ್ಲೆಯಲ್ಲಿ ಕಟ್ಟಡ ಹಾಗೂ ಮಹಾತ್ಮ ಗಾಂಧಿಧೀಜಿ ಉದ್ಯೋಗ ಖಾತರಿ ಯೋಜನೆಯಡಿ 15 ಲಕ್ಷಕ್ಕಿಂತಲೂ ಹೆಚ್ಚು ಕಾರ್ಮಿಕರಿದ್ದು, ಈ ಕಾರ್ಮಿಕರ ಕಲ್ಯಾಣಕ್ಕಾಗಿ ಕರ್ನಾಟಕ ಕಟ್ಟಡ ಹಾಗೂ ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ತೆರಿಗೆ ರೂಪದಲ್ಲಿ ಆರು ಕೋಟಿ ರೂ. ತೆರಿಗೆ ಸಂಗ್ರಹಿಸಿದೆ. ಆದರೆ 1996ರ ಪ್ರಕಾರ ತೆರಿಗೆ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಬಳಸಬೇಕು ಎಂಬ ನಿಯಮವಿದ್ದರೂ ಸರಿಯಾಗಿ ಹಣ ಬಳಕೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಕಾರ್ಮಿಕರ ಬೇಡಿಕೆಗಳಾದ ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿ ಬೆಳಗಾವಿ ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು. ಬೆಳಗಾವಿ ಉದ್ಯಮಬಾಗ ಕಾರ್ಮಿಕ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಸ್ಥಳಾಂತರಿಸಬೇಕು. ಕಾರ್ಮಿಕರಿಗೆ ವಾಹನ ಸೌಲಭ್ಯ ಹಾಗೂ ಮೂಲಸೌಕರ್ಯ ಒದಗಿಸಬೇಕು. ನರೇಗಾ ಕಾರ್ಮಿಕರ ನೋಂದಣಿಗಾಗಿ ವಿಶೇಷ ಅಭಿಯಾನ ಹಮ್ಮಿಕೊಂಡ ಒಂದು ವರ್ಷದಲ್ಲಿ ಜಿಲ್ಲೆಯ ಎಲ್ಲ ನರೇಗಾ ಕಾರ್ಮಿಕರ ನೋಂದಣಿ ಪೂರ್ಣಗೊಳಿಸಬೇಕು. ಬೆಳಗಾವಿಯಲ್ಲಿರುವ ವಿವಿಧ ಭಾಷೆ ಕಾರ್ಮಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಹುಭಾಷೆಯುಳ್ಳ ಅಧಿಕಾರಿಗಳ ನೇಮಕ ಮಾಡಬೇಕು. ನರೇಗಾ ಕಾರ್ಮಿಕರ ಬಾಕಿ ವೇತನ ತಕ್ಷಣ ಪಾವತಿಸಬೇಕು. ಅಲ್ಲದೇ ಪ್ರತಿವರ್ಷ 200 ದಿನ ಉದ್ಯೋಗ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರದ ಗಮನ ಸೆಳೆದರು.
ಪ್ರತಿಭಟನೆಯಲ್ಲಿ ಸಂಘ ಮುಖಂಡರಾದ ಸುಜೀತ ಮುಳಗುಂದ, ಶಿವಾಜಿ ಕಾಗಣೇಕರ, ಬೈರು ಸಾಂವತ, ಸಂಜು ಭೋಸೆಲೆ, ಸುಧಿಧೀರ ಕಾಕತಕರ್, ಅಡೇವಪ್ಪ ಕುಂದ್ರರಗಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಕಾರ್ಮಿಕ ಸಚಿವ ಭೇಟಿ
ಪ್ರತಿಭಟನಾ ಸ್ಥಳಕ್ಕೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿ, ಬೆಳಗಾವಿ ಉದ್ಯಮಬಾಗ ಕಾರ್ಮಿಕ ಕಚೇರಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಸ್ಥಳಾಂತರಿಸುವ ಕುರಿತು ಡಿಸಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.