Advertisement

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

10:24 AM Sep 04, 2019 | Suhan S |

ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣ ವಿಳಂಬ ನೀತಿ ಖಂಡಿಸಿ, ಆಣೂರ ಹಾಗೂ ಬುಡಪನಹಳ್ಳಿ ಕೆರೆಗಳಿಗೆ ನೀರುವ ತುಂಬಿಸುವ ಯೋಜನೆ ಜಾರಿಗೆ ಆಗ್ರಹಿಸಿ ಮುಖ್ಯರಸ್ತೆ ಅಗಲೀಕರಣ ಸಮಿತಿ ಹಾಗೂ ವಿವಿಧ ಸಂಘಟನೆಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅಗಲೀಕರಣ ಸಮಿತಿ ಅಧ್ಯಕ್ಷ ಸುರೇಶ ಛಲವಾದಿ, 13 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತ ಬಂದಿದ್ದರೂ ಅಧಿಕಾರದಲ್ಲಿದ್ದ ಶಾಸಕರು ಕೇವಲ ಭರವಸೆಗಳ ಮೇಲೆಯೇ ತಮ್ಮ ಅವಧಿ ಪೂರೈಸಿಕೊಂಡಿದ್ದಾರೆ. ಅದಾಗ್ಯೂ ಯಾವೊಬ್ಬ ನಾಯಕರೂ ಮುಖ್ಯರಸ್ತೆ ಅಗಲೀಕರಣಕ್ಕೆ ಮುಂದಾಗದಿರುವುದು ನಾಚಿಕೆಗೇಡಿನ ಸಂಗತಿ. ಅಗಲೀಕರಣ ನಡೆಯಬೇಕಿರುವುದು ಕೇವಲ 15 ಅಡಿ ಮಾತ್ರ. ಈ ಸಮಸ್ಯೆಯಿಂದಾಗಿ ನಿತ್ಯ ಸಾಕಷ್ಟು ಜನರು ತೊಂದರೆ ಅನುಭವಿಸುವಂತಾಗಿದೆ.ಮುಖ್ಯರಸ್ತೆ ನಮ್ಮ ಹಕ್ಕು. ಆದರೆ, ಕೆಲಪಟ್ಟಭದ್ರ ಹಿತಾಸಕ್ತಿಗಳು ಇದಕ್ಕೆ ಅಡ್ಡಿಪಡಿಸುತ್ತಿವೆ ಎಂದು ಆರೋಪಿಸಿದರು.

ಕರವೇ ಅಧ್ಯಕ್ಷ ಚಂದ್ರು ಛತ್ರದ ಮಾತನಾಡಿ, ಶಾಸಕರಾಗಿ ಆಯ್ಕೆಯಾದ ದಿನದಿಂದಲೂ ಮುಖ್ಯರಸ್ತೆ ಅಗಲೀಕರಣ ಮಾಡುವುದಾಗಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದನ್ನು ಬಿಟ್ಟರೇ ಯಾವುದೇ ಶಾಸಕರು ಮುಖ್ಯರಸ್ತೆ ಅಗಲೀಕರಣ ಮಾಡಿಲ್ಲ. ಭೂಸ್ವಾಧೀನಕ್ಕೆ 15 ಕೋಟಿ ರೂ. ಬಿಡುಗಡೆಗೊಳಿಸಲು ಸಾಧ್ಯವಾಗಿಲ್ಲ. ಅಲ್ಲದೇ, ಆಣೂರ ಮತ್ತು ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆಗೆ 426 ಕೋಟಿ ರೂ.ಆಡಳಿತಾತ್ಮಕ ಅನುಮೋದನೆ ದೊರೆತಿಲ್ಲ. ಸೆ.14 ರೊಳಗಾಗಿ ಹಣ ಬಿಡುಗಡೆಗೊಳಿಸಿದ ಬಗ್ಗೆ ಸುದ್ದಿ ತರಬೇಕು; ಇಲ್ಲವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಮುಖ್ಯರಸ್ತೆ ಅಗಲೀಕರಣ ಸೇರಿದಂತೆ ಆಣೂರು ಮತ್ತು ಬುಡಪನಹಳ್ಳಿ ಕೆರೆಗಳ ಮೂಲಕ ತಾಲೂಕಿನ 36 ಕೆರೆಗಳನ್ನು ತುಂಬಿಸುವ ಯೋಜನೆಗೆ ಅಗತ್ಯ ಅನುದಾನ ಒದಗಿಸುವುದಾಗಿ ಸಾರ್ವಜನಿಕರೆದುರು ಸ್ಥಳೀಯ ಶಾಸಕರು ಭರವಸೆ ನೀಡಿದ್ದರು. ಆದರೆ, ಈ ವರೆಗೂ ಎಲ್ಲವೂ ಕೇವಲ ಭರವಸೆಗಳಾಗಿಯೇ ಉಳಿದಿದ್ದು, ಇನ್ನೂ ತಾಳ್ಮೆಯಿಂದ ಕಾಯಲಾಗದು. ಶಾಸಕರಿಂದ ಸೂಕ್ತ ಸ್ಪಂದನೆ ದೊರೆಯದಿದ್ದರೇ ಅವರ ನಿವಾಸದೆದುರೇ ಧರಣಿ ನಡೆಸುವುದಾಗಿ ಎಚ್ಚರಿಸಿದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ರಾಜ್ಯದ ವಿವಿಧ ಹಲವು ತಾಲೂಕುಗಳಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಗಳಿಗೆ ಮುಖ್ಯಮಂತ್ರಿ ಬಿಎಸ್‌ವೈ ಅನುದಾನ ಬಿಡುಗಡೆ ಮಾಡಿದ್ದಾರೆ. ಇತರೇ ಶಾಸಕರಿಗೆ ಅನುದಾನ ಸಿಗುತ್ತದೆ ಎಂದಾದರೇ ನಮ್ಮ ತಾಲೂಕಿಗೇಕೆ ಸಿಗುತ್ತಿಲ್ಲ? ಇಂತಹ ತಾರತಮ್ಯ ಬಿಡಬೇಕು ಯಾವುದೇ ಪ್ರಮುಖ ನದಿಗಳಿಲ್ಲದೇ ಕ್ಷೇತ್ರದ ಜನರು ನೀರಿಗಾಗಿ ತೊಂದರೆ ಪಡುತ್ತಿರುವಾಗ ನಮ್ಮ ಕ್ಷೇತ್ರಕ್ಕೆ ಏಕೆ ಅನುದಾನ ಸಿಗುತ್ತಿಲ್ಲ ಎಂದು ಪ್ರಶ್ನಿಸಿದರು.

Advertisement

ರುದ್ರಗೌಡ ಕಾಡನಗೌಡ್ರ, ಮಲ್ಲೇಶಪ್ಪ ಚಿಕ್ಕಣ್ಣನವರ, ಮಹೇಶ ಉಜನಿ, ಪಾಂಡು ಸುತಾರ, ಕಿರಣ ಗಡಿಗೋಳ, ಫರೀದಾಬಾನು ನದೀಮುಲ್ಲಾ, ಕರಬಸಪ್ಪ ಮರಗಾಲ, ಮೌನೇಶ ಬಡಿಗೇರ, ಪೀರಾಂಬಿ, ಮಲ್ಲೇಶಪ್ಪ ಡಂಬಳ, ಚಿಕ್ಕಪ್ಪ ಛತ್ರದ, ಗುತ್ತೆಮ್ಮ, ಎಸ್‌.ಆರ್‌.ಹುರಿಗೆಜ್ಜಿ, ಶಂಕರ ಕುಸಗೂರ, ಮಂಜುನಾಥ ಭೋವಿ, ಬಿ.ಸಿ.ಹಾವೇರಿಮಠ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತ ಸಂಘದ ಮುಂಖಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next