ದಾವಣಗೆರೆ: ಕೋವಿಡ್-19 ಪರಿಹಾರದ ನಿಟ್ಟಿನಲ್ಲಿ 5 ಸಾವಿರ ರೂ. ಪರಿಹಾರಧನವನ್ನುಅರ್ಹ, ನೈಜ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆ ಮಾಡುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಶ್ರಮಶಕ್ತಿ ಕಟ್ಟಡ ಕಾರ್ಮಿಕರ ಯೂನಿಯನ್ ನೇತೃತ್ವದಲ್ಲಿ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿ ಎದುರು ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ದಾವಣಗೆರೆ ನಗರ ಮತ್ತು ಜಿಲ್ಲೆಯಲ್ಲಿ ಸಾವಿರಾರು ಕಟ್ಟಡ ಕಾರ್ಮಿಕರಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಲಾಕ್ ಡೌನ್ ಪರಿಣಾಮ ಅನೇಕರು ಕೈಯಲ್ಲಿ ಕೆಲಸ ಇಲ್ಲದೆ ಪರಿತಪಿಸುತ್ತಿದ್ದಾರೆ. ಕೊರೊನಾ ಸಂಕಷ್ಟದಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿ ಕಾರ್ಮಿಕರಿಗೆ 5 ಸಾವಿರ ರೂ. ಸಹಾಯಧನ ಘೋಷಣೆಮಾಡಿದ್ದು, ಅನೇಕರು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಿ ಸಹಾಯಧನ ಪಡೆದುಕೊಂಡಿದ್ದಾರೆ. ನಿಜವಾದ ಮತ್ತು ಅರ್ಹ ಕಾರ್ಮಿಕರಿಗೆ ಯಾವುದೇ ರೀತಿಯ ಸಹಾಯಧನ ದೊರೆತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಸಹಾಯಧನದ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಮಂಡಳಿಯಿಂದ ಸಹಾಯಧನ ಕೊಡುವುದನ್ನ ನಿಲ್ಲಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಕಟ್ಟಡ ಕಾರ್ಮಿಕರೇಅಲ್ಲದವರಿಗೆ ಹಣ ದೊರೆತಿದ್ದು. ನಿಜವಾಗಿಯೂ ಸಹಾಯಧನ ದೊರೆಯಬೇಕಾದವರಿಗೆ ಒಂದು ರೂಪಾಯಿಯೂ ದೊರೆಯದಂತಾಗಿದೆ. ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡನಿಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪರಿಹಾರ ಧನ ಕೋರಿ ಸೇವಾಸಿಂಧು ಮೂಲಕ ಸಲ್ಲಿಸುವ ಆರ್ಜಿಗಳನ್ನ ಪರಿಶೀಲಿಸಿ, ನಿಜವಾಗಿಯೂ ಕಟ್ಟಡ ಕಾರ್ಮಿಕರಾದವರಿಗೆ ಮಾತ್ರವೇ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಗುರುತಿನ ಚೀಟಿ ಪರಿಶೀಲಿಸಿ, ಮಂಜೂರಾತಿ ನೀಡಬೇಕು. ಪರಿಹಾರದ ಧನದ ಜೊತೆಗೆ ಮದುವೆ ಸಹಾಯಧನ, ವಿದ್ಯಾರ್ಥಿ ವೇತನ,ಆಸ್ಪತ್ರೆಯ ಚಿಕಿತ್ಸಾದ ಹಣ ಭರ್ತಿ ಮಾಡಬೇಕು.ಹೊಸ ಗುರುತಿನಚೀಟಿ ಮತ್ತು ನವೀಕರಣದ ಗುರುತಿನಚೀಟಿಗಳಿಗೆ ಅರ್ಜಿ ಸಲ್ಲಿಸಿದ ಒಂದು ತಿಂಗಳಲ್ಲಿ ನೀಡುವ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು.
ಶ್ರಮಶಕ್ತಿ ಕಟ್ಟಡ ಕಾರ್ಮಿಕರ ಯೂನಿಯನ್‌ನ ಎಂ. ಕರಿಬಸಪ್ಪ, ಜಬೀನಾ ಖಾನಂ, ಅನ್ವರ್‌ಖಾನ್, ಮೌಲಾನಾ ಸಾಬ್, ಬಿ. ಅಸ್ಲಾಂ, ಎಚ್. ಶಿವಪ್ಪ, ಗೌಸ್, ಡಿ.ವಿ. ವಾಣಿ, ಜಬೀವುಲ್ಲಾ, ನಿಜಾಮ್, ಹಜರತ್ ಅಲಿ, ಮುಬಾರಕ್ ಅಲಿ ಇತರರು ಇದ್ದರು.