ಕಾರಟಗಿ: ಹಮಾಲಿ ಕಾರ್ಮಿಕರಿಗೆ ವಸತಿ ಯೋಜನೆ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ವತಿಯಿಂದ ಶುಕ್ರವಾರ ಎಪಿಎಂಸಿ ಅಧ್ಯಕ್ಷರಿಗೆ ಹಾಗೂ ಎಪಿಎಂಸಿ ಮೇಲ್ವಿಚಾರಕರಿಗೆ ಮನವಿ ಪತ್ರ ಸಲ್ಲಿಸಿದರು.
ಇದಕ್ಕೂ ಮುಂಚೆ ಪಟ್ಟಣ ಕನಕದಾಸ ವೃತ್ತದಿಂದ ಮುಖ್ಯರಸ್ತೆಯ ಮೂಲಕ ಮೆರ ವಣಿಗೆ ಮೂಲಕ ಎಪಿಎಮ್‌ಸಿ ಯಾರ್ಡನ ಎಪಿಮ್‌ಸಿ ಕಚೇರಿಗೆ ತೆರಳಿದ ಹಮಾಲರು ರಸ್ತೆಯುದ್ಧಕ್ಕೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.
ಸಿಐಟಿಯು ತಾಲೂಕು ಮುಖಂಡ ಅಮರೇಶ ಕಡಗಲ್ ಮಾತನಾಡಿ, ದಿನವಿಡಿ ಹೊಟ್ಟೆಪಾಡಿಗಾಗಿ ಶ್ರಮಿಸುವ ಹಮಾಲರಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ ಇಲ್ಲವಾಗಿದೆ. ಎಪಿಎಮ್‌ಸಿ ಮಾರುಕಟ್ಟೆಗೆ ತರುವ ಉತ್ಪನ್ನ ಮತ್ತು ಬಜಾರ್‌ಗಳಲ್ಲಿ ಆಗುವ ದಿನದ ವ್ಯಾಪಾರ ಮತ್ತು ವಹಿವಾಟಿನ ಮೇಲೆ ಹಮಾಲರು ಜೀವನ ಸಾಗಿಸಬೇಕಾಗಿದೆ. ಹಮಾಲಿ ಮಕ್ಕಳ ವಿದ್ಯಾರ್ಥಿ ವೇತನ ಮುಂದು ವರೆಸಿ 5 ಸಾವಿರಕ್ಕೆ ಹೆಚ್ಚಿಸಬೇಕು. ಹಮಾಲಿ ಕಾರ್ಮಿಕರಿಗೆ 60 ವರ್ಷ ಆದ ನಂತರ ಒಂದು ಬಾರಿ 50 ಸಾವಿರ ನಿವೃತ್ತಿ ಪರಿಹಾರ ನೀಡಬೇಕು. ಶ್ರಮಿಕ ಭವನ ನಿರ್ಮಿಸಬೇಕು. ಹೀಗೆ ಬೇಡಿಕೆಗಳ ಮನವಿಯನ್ನು ಎಪಿಎಂಸಿ ಮೇಲ್ವಿಚಾರಕ ರಾಮಾಚಾರ್ ಇವರಿಗೆ ಸಲ್ಲಿಸಿದರು.
ಹಮಾಲರ ಮನವಿ ಸ್ವೀಕರಿಸಿ ಮಾತ ನಾಡಿದ ಮೇಲ್ವಿಚಾರಕ ರಾಮಾಚಾರ, ಹಮಾಲಿ ಕಾರ್ಮಿಕರ ಸಂಘದ ಕಚೇರಿಗೆ ನಿವೇಶನವಿದ್ದು ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮನವಿಯನ್ನು ಸಂಬಂಧಿಸಿದ ಇಲಾಖೆಗೆ ರವಾನಿಸಲಾಗುವುದು ಎಂದರು. ಹಮಾಲಿ ಕಾರ್ಮಿಕ ಸಂಘದ ಪ್ರಮುಖರಾದ ಹನಮಂತಪ್ಪ ಸಿಂಗಾಪೂರ, ಮೌಲಾಸಾಬ್, ದುರ್ಗಪ್ಪ, ಶಿವಜಾತಪ್ಪ, ಬಸಣ್ಣ ನಾಗನಕಲ್, ಜಗಧೀಶ ನಾಗನಕಲ್, ಅಮರೇಶ ನಾಗನಕಲ್, ಆನಂದ, ಚಂದ್ರ ಕುಮಾರ, ಅಮರೇಶಪ್ಪ, ಕರುಣಾಮಯಿ, ಗಂಗಪ್ಪ, ಬಜಾರ್ ಹಮಾಲರ ಸಂಘ, ವೇರ್ ಹೌಸ್ ಹಮಾಲರು, ಕರುಣಾಮಯಿ ಹಮಾಲರು, ನಾಗನಕಲ್ ಹಮಾಲರ ಸಂಘದ ಸದಸ್ಯರು ಇದ್ದರು.