ಮದ್ದೂರು: ಮದ್ದೂರು-ಕೊಪ್ಪ ಮಾರ್ಗ ದುರಸ್ತಿಗೊಳಿಸುವಂತೆ ಒತ್ತಾಯಿಸಿ ರೈತಸಂಘದ ಕಾರ್ಯ ಕರ್ತರು ಲೋಕೋಪ ಯೋಗಿ ಕಚೇರಿಗೆ ಮುತ್ತಿಗೆ ಹಾಕಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರ ಸಮೀಪದ ಲೋಕೋಪಯೋಗಿ ಕಚೇರಿ ಬಳಿ ಜಮಾಯಿಸಿ, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ತಾಲೂಕಿನಾದ್ಯಂತ ಹಾಳಾಗಿರುವ ರಸ್ತೆ ಗಳನ್ನು ದುರಸ್ತಿಗೊಳಿಸಲು ಕ್ರಮಕೈಗೊಳ್ಳ ಬೇಕು ಎಂದು ಆಗ್ರಹಿಸಿದರು.
ಮದ್ದೂರು-ಕೊಪ್ಪ ಮಾರ್ಗದ ರಸ್ತೆ ಹಲವು ಸಮಸ್ಯೆಗಳಿಂದ ಕೂಡಿದ್ದು, ಪ್ರಯಾಣಿಕರೂ ಸೇರಿದಂತೆ ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಸಾರ್ವಜನಿಕರು ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ಬಂದೊದಗಿದೆ ಎಂದು ಆರೋಪಿಸಿದರು.
ಈ ಮಾರ್ಗದ ಗ್ರಾಮಗಳಿಗೆ ರಾತ್ರಿ ವೇಳೆ ತೆರಳಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದ್ದು ಆಳೆತ್ತರದ ಗುಂಡಿಗಳಿಗೆ ದ್ವಿಚಕ್ರ ವಾಹನ ಸವಾರರು ಬಿದ್ದು ಸಾವು ನೋವುಗಳು ಸಂಭವಿಸುತ್ತಿವೆ.ನಾಗಮಂಗಲ ಹಾಗೂ ಮದ್ದೂರು ಕ್ಷೇತ್ರದ ಶಾಸಕರು ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆಂದು ದೂರಿದರು.
ಕೂಡಲೇ ಕೊಪ್ಪ ಮಾರ್ಗದ ರಸ್ತೆ ಮೇಲ್ದರ್ಜೆಗೇರಿಸುವ ಜತೆಗೆ ಡಾಂಬರಿಕರಣ ಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಅವಕಾಶ ಕಲ್ಪಿಸಬೇಕು ಎಂದು ತಪ್ಪಿದಲ್ಲಿ ಕಚೇರಿ ಬಳಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುವ ಜತೆಗೆ ಅಧಿಕಾರಿಗಳಿಗೆ ಚಾಟಿ ಬೀಸುವ ಕಾರ್ಯಕ್ಕೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು.
ರಾಜ್ಯ ಸಂಘಟನೆ ಕಾರ್ಯದರ್ಶಿ ರಾಮಕೃಷ್ಣಯ್ಯ, ತಾಲೂಕು ಅಧ್ಯಕ್ಷ ಜಿ.ಎ. ಶಂಕರ್, ಪದಾಧಿಕಾರಿಗಳಾದ ವರದ ರಾಜು, ಗೊಲ್ಲರದೊಡ್ಡಿ ಅಶೋಕ್, ಶಿವ ರಾಮು, ಕುಮಾರ್, ರಾಮಯ್ಯ, ವೆಂಕಟೇಶ್, ಕೃಷ್ಣ, ಹೊನ್ನಶೆಟ್ಟಿ, ಲಿಂಗಪ್ಪಾಜಿ ನೇತೃತ್ವವಹಿಸಿದ್ದರು