Advertisement

ಪುನರ್‌ವಸತಿಗೆ ಆಗ್ರಹಿಸಿ ಪ್ರತಿಭಟನೆ

01:29 PM Sep 17, 2019 | Suhan S |

ಕಂಪ್ಲಿ: ದೇವದಾಸಿ ಮಹಿಳೆಯರಿಗೆ ಪುನರ್ವಸತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಕಂಪ್ಲಿ ತಾಲ್ಲೂಕು ಸಮಿತಿ, ಸಿಐಟಿಯು ಹಾಗೂ ಕಟ್ಟಡ ಕಾರ್ಮಿಕ ಸಂಘದ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ್‌ ಕಚೇರಿ ಮುಂಭಾಗದಲ್ಲಿ ಸೋಮವಾರ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ ತಹಶೀಲ್ದಾರ್‌ ಎಂ. ರೇಣುಕಾಗೆ ಮನವಿ ಪತ್ರ ಸಲ್ಲಿಸಿದರು.

Advertisement

ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ ಮಾತನಾಡಿ, ದೇವದಾಸಿ ಮಹಿಳೆಯರ ಕುಟುಂಬಗಳಿಗೆ ಪುನರ್ವಸತಿ ಸೇರಿದಂತೆ ನಾನಾ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ಎಲ್ಲ ದೇವದಾಸಿ ಮಹಿಳೆಯರಿಗೆ ಐದು ಸಾವಿರವರೆಗೆ ಸಹಾಯಧನ ಹೆಚ್ಚಿಸುವ ಜತೆಗೆ ಪರಿತ್ಯಕ್ತ ಹೆಣ್ಣು ಮಕ್ಕಳಿಗೂ ವಿಸ್ತರಿಸಬೇಕು. ದೇವದಾಸಿ ಮಹಿಳೆಯರ ಪಟ್ಟಿಯಲ್ಲಿ ಬಿಟ್ಟು ಹೋದ ಮಹಿಳೆಯರನ್ನು ಗಣತಿ ಪಟ್ಟಿಯಲ್ಲಿ ಸೇರ್ಪಡಿಸಿ, ಎಲ್ಲ ನೆರವನ್ನು ಒದಗಿಸಬೇಕು. ಪುನರ್ವಸತಿ ಕಲ್ಪಿಸಬೇಕು. ದೇವದಾಸಿ ಮಹಿಳೆಯರ ಮಕ್ಕಳಿಗೆ ಮದುವೆಯ 5 ಲಕ್ಷ ರೂ. ಪ್ರೋತ್ಸಾಹಧನ ನೀಡಬೇಕು. ಬರಗಾಲ, ಅತಿವೃಷ್ಟಿ ಮತ್ತು ಪ್ರವಾಹದ ಹಿನ್ನಲೆ ದೇವದಾಸಿ ಮಹಿಳೆಯರ, ಮಕ್ಕಳ, ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಬೇಕು. ಮತ್ತು ದೇವದಾಸಿ ಮಹಿಳೆಯರು ಹಾಗೂ ಮಕ್ಕಳಿಗೆ ತಲಾ 5 ಎಕರೆ ಭೂಮಿ ಉಚಿತ ನೀಡುವ ಜತೆಗೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಇಂದು ಪಟ್ಟಣದಲ್ಲಿ ಸಾಂಕೇತಿಕ ಧರಣಿ ನಡೆಸಿದ್ದು, 17ರಂದು ಹೊಸಪೇಟೆ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾಧ್ಯಕ್ಷೆ ಕೆ. ನಾಗರತ್ನ, ಹೊಸಪೇಟೆ ತಾಲೂಕು ಅಧ್ಯಕ್ಷೆ ಕೆ. ಹಂಪಮ್ಮ, ಕಾರ್ಯದರ್ಶಿ ಎಸ್‌. ಯಲ್ಲಮ್ಮ, ಸಿಐಟಿಯು ಕಂಪ್ಲಿ ಸಂಚಾಲಕ ಬಂಡಿ ಬಸವರಾಜ ಹಾಗೂ ಡಿ. ಮುನಿಸ್ವಾಮಿ, ರಾಜಬಕ್ಷಿ, ಹೊನ್ನೂರಸಾಬ್‌, ನಾಗರಾಜ, ಮಾರೆಮ್ಮ, ಹಂಪಮ್ಮ, ಪಕ್ಕೀರಮ್ಮ, ದುರುಗಮ್ಮ ಸೇರಿದಂತೆ ಮಹಿಳೆಯರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next