ಚಿತ್ತಾಪುರ: ಪೊಲೀಸ್ ಠಾಣೆಯ ಪಿಎಸ್‌ಐ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಆಗ್ರಹಿಸಿ ಪೊಲೀಸ್ ಠಾಣೆ ಎದುರು ಪ್ರತಿಭಟನ ನಡಸಿದ ಘಟನೆ ಸೋಮವಾರ ಸಂಜೆ ಜರುಗಿದೆ.
ಬಂಧಿತ ಆರೋಪಿ ಅಯ್ಯಪ್ಪ ರಾಮತೀರ್ಥ ಅವರ ತಾಯಿ ಸೀತಾಬಾಯಿ ಸೇರಿದಂತೆ ಸಮಾಜ ಸೇವಕ ಮಣಿಕಂಠ ರಾಠೊಡ, ಅಶ್ವಥರಾಮ್ ರಾಠೊಡ, ಯೂನಿಸ್, ಶಂಭು ದಿಗ್ಗಾಂವ ಸೇರಿದಂತೆ ನೂರಾರು ಜನರು ಸೇರಿದ್ದರು. ಮಧ್ಯಾಹ್ನ 2 ಗಂಟೆಗೆ ಪ್ರತಿಭಟನೆ ಮೂಲಕ ಬಂದು ಸಂಜೆ 5 ಗಂಟೆಯ ವರೆಗೆ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು. ಪಿಎಸ್‌ಐ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು ಹಾಗೂ ಅಯ್ಯಪ್ಪ ಅವರನ್ನು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದರು.
ಠಾಣೆಯ ಎದುರು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಡಿವೈಎಸ್‌ಪಿ ಉಮೇಶ ಚಿಕ್ಕಮಠ ಆಗಮಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ತನಿಖೆ ಮಾಡಲಾಗುವುದು ಎಂದು ಎಂದು ಪ್ರತಿಭಟನಾಕಾರರಿಗೆ ತಿಳಿಸಿ ವಾಪಸ್ಸು ಕಳುಹಿಸಿದ್ದರು.
ವಿಷಯ ತಿಳಿದ ತಕ್ಷಣ ನೂರಾರು ದಲಿತ ಮುಖಂಡರು ಪೊಲೀಸ್ ಠಾಣೆಗೆ ದೌಡಾಯಿಸಿ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಜಾತಿ ನಿಂದನೆ ಮಾಡಿದ ಆರೋಪಿ ಅಯಪ್ಪ ರಾಮತೀರ್ಥ ಹಾಗೂ ಆರೋಪಿಗೆ ಕುಮ್ಮಕ್ಕು ನೀಡಿರುವ ಮಣಿಕಂಠ ರಾಠೊಡ ಮತ್ತು ಅಶ್ವಥರಾಮ್ ರಾಠೊಡ ಅವರನ್ನು ಗಡಿಪಾರು ಮಾಡುವಂತೆ ಸ್ಥಳಕ್ಕೆ ಭೇಟಿ ನೀಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಅವರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆನಂದ್ ಕಲ್ಲಕ್, ಮಲ್ಲಪ್ಪ ಹೊಸಮನಿ, ಉದಯ ಸಾಗರ್, ಶಿವರುದ್ರಪ್ಪ ಭೀಣಿ, ಶ್ರೀಕಾಂತ್ ಶಿಂದೆ, ಮಲ್ಲಿಕಾರ್ಜುನ ಬೇಣ್ಣೂರಕರ್, ಆನಂದ ಮೊಗಲಾ, ಮಲ್ಲಿಕಾರ್ಜುನ ಬೊಮ್ಮನಹಳ್ಳಿ, ಸಂಜಯ ಬೂಳಕರ್, ಮಲ್ಲಿಕಾರ್ಜುನ ಮೂಡಬೂಳಕರ ಸೇರಿದಂತೆ ಅನೇಕರು ಇದ್ದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇಲೆ ವಾತಾವರಣ ತಿಳಿಗೊಳಿಸಿದ್ದರು. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.