ಮದ್ದೂರು: ತಾಲೂಕಿನ ಕುದರಗುಂಡಿ ಗ್ರಾಮದ ಮಲ್ಲಯ್ಯನಗರ ಬಡಾವಣೆ ನಿವಾಸಿಗಳಿಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ಬಳಿಕ ಶಾಸಕರ ನಿವಾಸಕ್ಕೆ ತೆರಳಿ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ಕುದರಗುಂಡಿ ಮಲ್ಲಯ್ಯನಗರ ಬಡಾವಣೆಯ ನಿವಾಸಿಗಳು ಗ್ರಾಮದಿಂದ ಟ್ರ್ಯಾಕ್ಟರ್ ಮೂಲಕ ಆಗಮಿಸಿ ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರಲ್ಲದೇ, ಕೂಡಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿದರು.
ಸಮಸ್ಯೆ ಬಗೆಹರಿಸಿಲ್ಲ: ಬಡಾವಣೆಯಲ್ಲಿ ಸುಮಾರು 25 ವರ್ಷಗಳಿಂದಲೂ 70 ಕುಟುಂಬಗಳು ವಾಸಿಸುತ್ತಿದ್ದು, ಇದುವರೆಗೂ ಹಕ್ಕುಪತ್ರ, ಕುಡಿಯುವ ನೀರು, ವಿದ್ಯುತ್, ಅಭಿವೃದ್ಧಿ ಕಾರ್ಯ ಹಾಗೂ ಇನ್ನಿತರೆ ಸೌಲಭ್ಯಗಳಿಂದ ವಂಚಿತವಾಗಿದ್ದು,ಅಧಿಕಾರಿಗಳು, ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ದೂರಿದರು.
ವಿಷಜಂತುಗಳ ವಾಸಸ್ಥಾನ: ಗುಡಿಸಲಿನಲ್ಲಿ ವಾಸಿಸುತ್ತಿರುವುದರಿಂದ ಮೀಟರ್ ಅಳವಡಿಸದ ಹಿನ್ನೆಲೆಯಲ್ಲಿ ಸೆಸ್ಕ್ ಇಲಾಖೆ ಕಳೆದ ಮೂರು ದಿನಗಳಿಂದಲೂ ವಿದ್ಯುತ್ ಕಡಿತಗೊಳಿಸಿದ್ದು, ಇದರಿಂದಾಗಿ ಕತ್ತಲಿನಲ್ಲೇ ದಿನ ಕಳೆಯುವ ಪರಿಸ್ಥಿತಿ ಬಂದೊದಗಿದ್ದು, ಬಡಾವಣೆಯಲ್ಲಿ ಶುಚಿತ್ವ ಇಲ್ಲದ ಕಾರಣ ಗಿಡಗಳು ಬೆಳೆದು ವಿಷಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಕೂಡಲೇ ಕ್ರಮ ವಹಿಸುವಂತೆ ಆಗ್ರಹಿಸಿದರು.
ಸರ್ವೆ ನಂ.245ರಲ್ಲಿ 6 ಎಕರೆ 20 ಗುಂಟೆ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಂಜೂರಾಗಿದ್ದು, ನಾವುಗಳೇ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದರೂ ಯಾವುದೇ ಸೌಲಭ್ಯ ಕಲ್ಪಿಸದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದು, ಸವಲತ್ತು ನೀಡುವಂತೆ ತಾಲೂಕು ಕಚೇರಿ, ಕಂದಾಯ, ತಾಪಂಇನ್ನಿತರೆ ಇಲಾಖೆಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದರು.
ಮನವಿ: ಶಾಸಕರ ನಿವಾಸಕ್ಕೆ ತೆರಳಿದ ಪ್ರತಿಭಟ ನಾಕಾರರು ಬಡಾವಣೆಯಲ್ಲಿ ಅದ್ವಾನಗೊಂಡಿರುವಸಮಸ್ಯೆಯನ್ನು ಬಗೆಹರಿಸಿ ತಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಡಿ.ಸಿ.ತಮ್ಮಣ್ಣ, ವಿದ್ಯುತ್ ಕಡಿತಗೊಳಿಸಿರುವ ಸಂಬಂಧ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಪರ್ಕ ಕೊಡಿಸುವ ಭರವಸೆ ನೀಡಿದರಲ್ಲದೇಹಕ್ಕುಪತ್ರ ವಿತರಣೆ ಸರ್ಕಾರದ ಯೋಜನೆ ಯಾಗಿದ್ದು, ಮೇಲಧಿಕಾರಿಗಳೊಟ್ಟಿಗೆ ಚರ್ಚಿಸಿ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆ ವೇಳೆ ಗ್ರಾಪಂ ಸದಸ್ಯೆ ಪ್ರಭಾ, ಎಪಿಎಂಸಿ ಮಾಜಿ ನಿರ್ದೇಶಕ ಶಿವಣ್ಣ, ಸ್ಥಳೀಯ ನಿವಾಸಿಗಳಾದ ನವೀನ್‌ಕುಮಾರ್, ಮಲ್ಲಾರಾಧ್ಯ,ಸರೋಜಮ್ಮ, ಮಹಾದೇವಿ, ಗಿರಿಕನ್ಯೆ, ಅಭಿಲಾಷ್, ಲಕ್ಷ್ಮೀಬಾಯಿ, ಶಿವಣ್ಣ, ನಂದನ್, ನಾಗಲಕ್ಷ್ಮೀ, ರವಿ, ಸುಧಾ, ಶೋಭಾ, ರತ್ನಮ್ಮ ನೇತೃತ್ವ ವಹಿಸಿದ್ದರು.