ಚಿಕ್ಕೋಡಿ: ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಚಿಕ್ಕೋಡಿ ಜಿಲ್ಲಾ ಘೋಷಣೆಯನ್ನು ಸರ್ಕಾರ ಶೀಘ್ರವಾಗಿ ಘೋಷಿಸಬೇಕೆಂದು ಒತ್ತಾಯಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಡಿ.13 ರಿಂದ ಹತ್ತು ದಿನಗಳ ಧರಣಿ ಸತ್ಯಾಗ್ರಹ ನಡೆಸಲು ತಿರ್ಮಾಣಿಸಲಾಗಿದೆ ಎಂದು ನೂತನ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಕಾಶಿನಾಥ ಕುರಣಿ ತಿಳಿಸಿದರು.
ಚಿಕ್ಕೋಡಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ಕಳೆದ 25 ವರ್ಷಗಳಿಂದ ಹೋರಾಟ ನಡೆದಿದೆ. ಆದರೆ ಸರ್ಕಾರ ಮಾತ್ರ ಜಿಲ್ಲೆಯನ್ನಾಗಿ ಘೋಷಣೆ ಮಾಡಿಲ್ಲ, ಇದರಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಜಿಲ್ಲಾ ಹೋರಾಟ ಸಮಿತಿಯು ಹತ್ತು ದಿನಗಳ ಕಾಲ ಚಿಕ್ಕೋಡಿ ಮಿನಿವಿಧಾನಸೌಧದ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದರು.
ಕಳೆದ ಎರಡು ವರ್ಷದ ಹಿಂದೆ ಜಿಲ್ಲಾ ಹೋರಾಟಗಾರ ಹಿರಿಯ ಜೀವಿ ದಿ.ಬಿ.ಆರ್.ಸಂಗಪ್ಪಗೊಳ ನೇತೃತ್ವದಲ್ಲಿ ಸುಮಾರು 52 ದಿನ ಬೃಹತ್ ಧರಣಿ ಸತ್ಯಾಗ್ರಹ ನಡೆಸಿ ಹೋರಾಟದ ಕೂಗು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳಗಾವಿ ಜಿಲ್ಲೆಯ ಎಲ್ಲ ಮುಖಂಡರು ಒಗ್ಗಟ್ಟಾಗಿ ಬಂದು ಹೇಳಿದರೇ ತಕ್ಷಣಾ ಜಿಲ್ಲೆಯನ್ನಾಗಿ ಘೋಷಣೆ ಮಾಡುತ್ತೇನೆಂದು ಭರವಸೆ ನೀಡಿದ್ದರು. ಆದರೆ ಜಿಲ್ಲೆಯ ಯಾವ ನಾಯಕರು ಚಿಕ್ಕೋಡಿ ಜಿಲ್ಲೆ ಮಾಡಲು ಮನಸ್ಸು ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಳಿಗಾಲದ ಅಧೀವೇಶನ ಬೆಳಗಾವಿಯಲ್ಲಿ ನಡೆಯುವುದರಿಂದ ಮುಖ್ಯಮಂತ್ರಿಗಳು ದೊಡ್ಡ ಮನಸ್ಸು ಮಾಡಿ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಿಸಿ ಗಡಿ ಭಾಗದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಬೆಳಗಾವಿ ಜಿಲ್ಲೆಯ ಎಲ್ಲ ನಾಯಕರು ಪಕ್ಷಾತೀತವಾಗಿ ಜಿಲ್ಲೆ ಮಾಡಲು ಮುಖ್ಯಮಂತ್ರಿ ಬಳಿ ಒತ್ತಡ ಹಾಕಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಹೋರಾಟ ಸಮಿತಿ ಸಂಚಾಲಕರಾದ ಸಂಜು ಬಡಿಗೇರ, ರಮೇಶ ಕರನೂರೆ, ಸಂಜು ಹಿರೇಮಠ, ಸುನೀಲ ಮಾಳಿ ಮುಂತಾದವರು ಇದ್ದರು.