ಮೈಸೂರು: ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಹಣ ಕೊಡಿಸುವಂತೆ ಆಗ್ರಹಿಸಿ ಜೂ.4ರಂದು ವಿಧಾನ ಸೌಧದ ಎದುರು ಪ್ರತಿಭಟನಾ ಧರಣಿ ನಡೆಸಲು ರಾಜ್ಯ ಕಬ್ಬು ಬೆಳೆಗಾರರ ಸಂಘ ತೀರ್ಮಾನಿಸಿದೆ. ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಮೈಸೂರಿನಲ್ಲಿ ನಡೆದ ರಾಜ್ಯ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಗಮನ ಸೆಳೆದರೂ ಕ್ರಮವಿಲ್ಲ: ರಾಜ್ಯದ 50ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಕಳೆದ 4 ತಿಂಗಳಿಂದ ಕಬ್ಬು ಸರಬರಾಜು ಮಾಡಿದ 3 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ರೈತರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳೇ ಹೆಚ್ಚಿನ ಹಣ ಬಾಕಿ ಉಳಿಸಿಕೊಂಡಿವೆ. ಬೀದರ್, ಕಲಬುರ್ಗಿ ಹಾಗೂ ವಿಜಯಪುರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳವರು ಕಬ್ಬು ಸರಬರಾಜು ಮಾಡಿದ ರೈತರಿಗೆ ಅರ್ಧದಷ್ಟು ಹಣ ಪಾವತಿಸಿ, ಬಾಕಿ ಹಣ ನೀಡದೆ ಸತಾಯಿಸುತ್ತಿವೆ. ಈ ಬಗ್ಗೆ ಸರ್ಕಾರದ ಗಮನಸೆಳೆದಿದ್ದರೂ ಯಾವುದೇ ಗಂಭೀರ ಕ್ರಮ ಕೈಗೊಂಡಿಲ್ಲ. ಹೀಗಾಗಿ ವಿಧಾನಸೌಧದ ಎದುರು ಪ್ರತಿಭಟನೆ ಮಾಡಬೇಕಾಗಿ ಬಂದಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಕ್ರಮ ಕೈಗೊಂಡಿಲ್ಲ: ಮೈಸೂರು ಜಿಲ್ಲೆ ಚುಂಚನ ಕಟ್ಟೆಯ ಶ್ರೀರಾಮ ಸಕ್ಕರೆ ಕಾರ್ಖಾನೆ, ಭದ್ರಾ ವತಿಯ ಎಂಪಿಎಂ ಸಕ್ಕರೆ ಕಾರ್ಖಾನೆಗಳನ್ನು ಪುನಾ ರಂಭಿಸುವುದಾಗಿ ಹೇಳಿದ್ದ ಸಮ್ಮಿಶ್ರ ಸರ್ಕಾರ, ಈವರೆಗೆ ಆ ಬಗ್ಗೆ ಕ್ರಮಕೈಗೊಂಡಿಲ್ಲ. ಕೂಡಲೇ ಈ ಎರಡೂ ಸಕ್ಕರೆ ಕಾರ್ಖಾನೆಗಳ ಪುನಾರಂಭಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಷರತ್ತು ಕೈಬಿಡಲಿ: ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಲು ಮಾರ್ಗಸೂಚಿ ಯಲ್ಲಿ ಹಲವಾರು ಷರತ್ತುಗಳನ್ನು ವಿಧಿಸುತ್ತಿರು ವುದರಿಂದ ಹೆಚ್ಚಿನ ರೈತರಿಗೆ ಸಾಲಮನ್ನಾ ಅನ್ವಯವಾಗುತ್ತಿಲ್ಲ. ಇದರಿಂದ ರೈತರಿಗೆ ಗೊಂದಲ ಉಂಟಾಗುತ್ತಿದೆ. ಹೀಗಾಗಿ ಸರ್ಕಾರ ಷರತ್ತುಗಳನ್ನು ಕೈಬಿಡಬೇಕು ಎಂದರು.
ಧರಣಿಗೆ ತೀರ್ಮಾನ: ಕಾಡಂಚಿನ ಗ್ರಾಮಗಳಿಗೆ ಆನೆ ಸೇರಿದಂತೆ ವನ್ಯಪ್ರಾಣಿಗಳು ದಾಳಿ ನಡೆಸಿ ರೈತರ ಬೆಳೆಗಳನ್ನು ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆ ಗಂಭೀರವಾಗಿ ಕ್ರಮ ಕೈಗೊಳ್ಳುತ್ತಿಲ್ಲ. ರೈತರು ಎದುರಿಸುತ್ತಿರುವ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಎಂ.ಬಿ.ಚೇತನ್, ಎಸ್.ಎನ್.ಬಸವಣ್ಣನವರ, ವೀರನಗೌಡ ಕೋ ಪಾಟೀಲ, ಎನ್.ಎಚ್.ದೇವಕುಮಾರ್, ಸುರೇಶ್ ಮಲ್ಲನಗೌಡ ಪಾಟೀಲ, ಬಾಬು ಬರ್ಮಪ್ಪ ಉಪಾಸಿ, ಅತ್ತಹಳ್ಳಿ ದೇವರಾಜು ಸೇರಿದಂತೆ ನೂರಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.