ಶ್ರೀರಂಗಪಟ್ಟಣ: ಗ್ರಾಪಂ ಸಿಬ್ಬಂದಿಯನ್ನು ಬೇರೆ ಇಲಾಖೆಗಳ ಕಾರ್ಯಗಳಿಗೆ ನಿಯೋಜನೆ ಮಾಡುತ್ತಿರುವುದನ್ನು ವಿರೋಧಿಸಿ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಡಿ.ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಕಚೇರಿ ಮುಂದೆ ಗ್ರಾಪಂನ ಸಿಬ್ಬಂದಿ ಭಾಗವಹಿಸಿ ಬೇರೆ ಇಲಾಖೆಗಳಿಗೆ ವರ್ಗಾವಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಅಟೆಂಡರ್ ಗಳನ್ನು ಕಂದಾಯ, ಶಿಕ್ಷಣ ಇತರ ಇಲಾಖೆಗಳಿಗೆ ನಿಯೋಜನೆ ಮಾಡಲಾಗುತ್ತಿದೆ. ಈಗಾಗಲೇ ಗ್ರಾಪಂಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಆದರೂ ಸರ್ಕಾರ ಇಲ್ಲಿನ ಸಿಬ್ಬಂದಿಯನ್ನು ಬೇರೆ ಇಲಾಖೆಗೆ ನಿಯೋಜಿಸಲಾಗಿರುವ ಸಿಬ್ಬಂದಿ, ತಮ್ಮನ್ನು ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ. ಮಹಿಳಾ ಸಿಬ್ಬಂದಿಗೆ ಮೂಲ ಸೌಕರ್ಯ ಒದಗಿಸುತ್ತಿಲ್ಲ. ಈಗಾಗಲೇ ಇಲ್ಲಿನ ಗ್ರಾಪಂ ಕಚೇರಿ ಕೆಲಸಗಳು ನನೆಗುದಿಗೆ ಬಿದ್ದಿವೆ.
ಹೀಗಾಗಿ ಸಿಬ್ಬಂದಿಯನ್ನು ಬೇರೇಡೆಗೆ ನಿಯೋಜಿಸಿದರೆ ಮತ್ತಷ್ಟು ಕಾರ್ಯಗಳು ನನೆಗುದಿಗೆ ಬೀಳುತ್ತವೆ. ಹೀಗಾಗಿ ಸಿಬ್ಬಂದ ನಿಯೋಜನೆ ನಿಲ್ಲಿಸಬೇಕು ಎಂದು ತಾಲೂಕು ಪಿಡಿಒ ಸಂಘದ ಅಧ್ಯಕ್ಷ ನಾಗೇಂದ್ರ ಒತ್ತಾಯಿಸಿ ತಹಶಿಲ್ದಾರ್ ಡಿ.ನಾಗೇಶ್ ಅವರಿಗೆ ಮನವಿ ಸಲ್ಲಿಸಿದರು.
ನಂತರ ತಾಪಂ ಇಒ ನಾಗವೇಣಿ ಅವರಿಗೂ ಮನವಿ ಸಲ್ಲಿಸಿ ಗ್ರಾಪಂ ಸಿಬ್ಬಂದಿ ಕೊರತೆಗೆ ಮೇಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ನಮ್ಮ ಬೇಡಿಕೆ ಈಡೇರಿಸಿ ಎಂದರು. ಮನವಿ ಸ್ವೀಕರಿಸಿ ಮಾತನಾಡಿದ ಇಒ ನಾಗವೇಣಿ, ಸಮಸ್ಯೆ ಕುರಿತು ಜಿಲ್ಲಾಧಿಕಾರಿ, ಜಿಪಂ ಸಿಇಒ, ಎಸಿ ಮತ್ತು ತಹಶೀಲ್ದಾರರಿಗೆ ಪತ್ರ ಬರೆಯಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಉಪಾಧ್ಯಕ್ಷ ಬಿ. ಬಸವರಾಜು, ಖಜಾಂಚಿ ರಮೇಶ್, ಸದಸ್ಯರಾದ ರಾಜೇಶ್ವರ, ಶಿಲ್ಪಾ, ಚೈತ್ರಾ, ಪ್ರಶಾಂತ ಬಾಬು, ಕೆಂಪಲಿಂಗೇಗೌಡ ಇತರರು ಇದ್ದರು.