Advertisement

ಸಾಮೂಹಿಕ ಅತ್ಯಾಚಾರ ಖಂಡಿಸಿ ಪ್ರತಿಭಟನೆ

12:01 PM Jul 06, 2019 | Suhan S |

ಯಲಬುರ್ಗಾ: ಪುತ್ತೂರಿನ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ಹಾಗೂ ಅಮಲು ಪದಾರ್ಥ ಸಾಗಾಟ ತಡೆಗಟ್ಟಲು ಆಗ್ರಹಿಸಿ ಎಸ್‌ಎಫ್‌ಐ ತಾಲೂಕು ಸಮಿತಿ ಪದಾಧಿಕಾರಿಗಳು ಹಾಗೂ ಸರಕಾರಿ ಪಪೂ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಸರ್ಕಾರಿ ಪಪೂ ಕಾಲೇಜು ಮೈದಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಕಿತ್ತೂರ ರಾಣಿ ಚನ್ನಮ್ಮ ವೃತ್ತದ ಮೂಲಕ ವಿವಿಧ ಘೋಷಣೆಗಳನ್ನು ಕೂಗುತ್ತಾ ತಹಶೀಲ್ದಾರ್‌ಗೆ ತೆರಳಿ ಬಳಿಕ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆ ನೇತೃತ್ವ ವಹಿಸಿದ್ದ ಎಸ್‌ಎಫ್‌ಐ ತಾಲೂಕಾಧ್ಯಕ್ಷ ಎಂ. ಸಿದ್ದಪ್ಪ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಯುವತಿಯನ್ನು ವಾಹನದಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿರುವ ಕೃತ್ಯ ಅಮಾನವೀಯ, ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಗಾಂಜಾ ಸೇವನೆಯಿಂದಾಗಿ ಇಂತಹ ಕೃತ್ಯಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತ್ತೀಚೆಗೆ ದೇರಳಕಟ್ಟೆಯಲ್ಲಿ ನಡೆದ ಕೊಲೆ ಯತ್ನದಲ್ಲೂ ಅಪರಾಧಿ ಅಮಲು ಪದಾರ್ಥ ಸೇವನೆ ಮಾಡಿ ಪೈಶಾಚಿಕ ಕೃತ್ಯ ನಡೆಸಿದ್ದಾನೆ. ಇನ್ನೂ ಪುತ್ತೂರಿನಲ್ಲಿ ನಡೆದ ಘಟನೆಯಲ್ಲೂ ಅತ್ಯಾಚಾರಿಗಳು ಅಮಲು ಪದಾರ್ಥ ಸೇವನೆ ಮಾಡಿ ಸಮಾಜ ತಲೆತಗ್ಗಿಸುವಂತಹ ಕೃತ್ಯ ಎಸಗಿದ್ದಾರೆ. ಇತ್ತೀಚೆಗೆ ಬೆಳ್ತಂಗಡಿಯ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದಿದೆ. ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕಾದರೆ ಕೂಡಲೇ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತ್ತಿವೆ ಎಂದು ಒತ್ತಾಯಿಸಿದರು.

ಪ್ರಶಾಂತ ಬಾಗಲಕೋಟಿ ಮಾತನಾಡಿ, ಯಾವುದೇ ಶಕ್ತಿಗಳ ಒತ್ತಡಕ್ಕೆ ಒಳಗಾಗದೇ ಅತ್ಯಾಚಾರವನ್ನು ಎಸಗಿದ ಆರೋಪಿಗಳಿಗೆ ಶೀಘ್ರ ಶಿಕ್ಷೆ ನೀಡಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿಕೊಡಬೇಕು ಮತ್ತು ಅಮಲು ಪದಾರ್ಥಗಳ ಸಾಗಾಟವನ್ನು ತಡೆಗಟ್ಟಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ತಹಶೀಲ್ದಾರ್‌ ರಮೇಶ ಅಳವಂಡಿಕರ್‌ ಪ್ರತಿಭಟನಾ ನಿರತ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ವಿದ್ಯಾರ್ಥಿಗಳಾದ ಬಾಲರಾಜ, ಅಶೋಕ, ಮಲ್ಲಿಕಾರ್ಜುನ, ಶ್ರೀದೇವಿ, ಉಮಾದೇವಿ ಬಿಸಿರೊಟ್ಟಿ, ಕಸ್ತೂರಿ ಮಾಜಿಗೌಡ್ರ, ಭೀಮವ್ವ ಹಳ್ಳಿ, ಗವಿಸಿದ್ದಯ್ಯ, ಜಗದೀಶ, ಹನುಮೇಶ, ಹುಚ್ಚಿರಪ್ಪ, ಕರಿಬಸಪ್ಪ, ಕುಬೇರ, ಮರೇಗೌಡ್ರ, ಮುತ್ತಣ್ಣ, ನಾಗರಾಜ, ರಮೇಶ, ಪರಶುರಾಮ, ಯಲ್ಲಪ್ಪ, ಮಂಜುನಾಥ, ಸಂತೋಷ, ಮುತ್ತಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next