ಚಿಕ್ಕಮಗಳೂರು: ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸುವಂತೆ ಒತ್ತಾಯಿಸಿ ಶ್ರೀರಾಮಸೇನೆ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಗೆ ಭಜನೆ ಮಾಡುತ್ತ ಆಗಮಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಸರ್ಕಾರಿ ದಾಖಲೆಗಳೇ ದತ್ತಪೀಠವು ಹಿಂದೂಗಳಿಗೆ ಸೇರಿದ್ದು ಎಂದು ಹೇಳುತ್ತಿವೆ. 7 ನ್ಯಾಯಾಲಯಗಳಲ್ಲಿ ತೀರ್ಪು ಹಿಂದೂಗಳ ಪರವಾಗಿಯೇ ಬಂದಿದ್ದರೂ ರಾಜ್ಯ ಸರ್ಕಾರ
ದತ್ತಪೀಠವನ್ನು ಹಿಂದೂಗಳ ಪೀಠ ಎಂದು ಘೋಷಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಹಿಂದೂಗಳು ಕಳೆದ ಹಲವು ವರ್ಷಗಳಿಂದ ತಾಳ್ಮೆಯಿಂದ ಇದ್ದಾರೆ. ತಾಳ್ಮೆ ಪರೀಕ್ಷಿಸುವುದು ಸರಿಯಲ್ಲ. ತಾಳ್ಮೆ ಕಳೆದುಕೊಂಡರೆ ಭಾರೀ ಅನಾಹುತವಾಗುತ್ತದೆ ಎಂಬ ಎಚ್ಚರಿಕೆ ಸರ್ಕಾರಕ್ಕೆ ಇರಲಿ. ಕೂಡಲೆ ದತ್ತಪೀಠವನ್ನು ಹಿಂದೂಗಳ ಪೀಠ ಎಂದು ಘೋಷಿಸಬೇಕು. ಅಲ್ಲಿಗೆ ಹಿಂದೂ ಅರ್ಚಕರನ್ನು ನೇಮಿಸಿ ತ್ರಿಕಾಲ ಪೂಜೆಗೆ ಅವಕಾಶ ಮಾಡಿಕೊಡಬೇಕು. ದತ್ತಪೀಠದಲ್ಲಿರುವ ಗೋರಿಗಳನ್ನು ನಾಗೇನಹಳ್ಳಿಯಲ್ಲಿರುವ ಬಾಬಾಬುಡನ್ ದರ್ಗಾಕ್ಕೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿದರು.
ನ್ಯಾಯಾಲಯದ ಆದೇಶದ ಹೆಸರಿನಲ್ಲಿ ದತ್ತಪೀಠದಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡುತ್ತಿಲ್ಲ. ಆದರೆ ಗುಹೆಯೊಳಗೆ ಮುಸ್ಲಿಮರಿಗೆ ನಮಾಜ್ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಈ ಬಗ್ಗೆ ಹಲವು ಬಾರಿ ದಾಖಲೆಗಳೊಂದಿಗೆ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದರೂ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹಿಂದೂಗಳಿಗೊಂದು ನ್ಯಾಯ, ಮುಸ್ಲಿಮರಿಗೊಂದು ನ್ಯಾಯ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಕೂಡಲೆ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶ್ರೀರಾಮಸೇನೆ ವತಿಯಿಂದ ನಡೆಯುತ್ತಿರುವ 13ನೇ ವರ್ಷದ ದತ್ತಮಾಲಾ ಅಭಿಯಾನ ಕಾರ್ಯಕ್ರಮ ಕುರಿತು ವಿವರಿಸಿದ ಅವರು, ಅ. 27 ರಂದು ನಗರದಲ್ಲಿ ದತ್ತಮಾಲಾಧಾರಿಗಳು ಮನೆ ಮನೆಗೆ ತೆರಳಿ ಪಡಿ ಸಂಗ್ರಹಿಸುವರು. ಅ. 28 ರಂದು ಬೆಳಗ್ಗೆ ನಗರದ ಕಾಮಧೇನು ಗಣಪತಿ ದೇವಾಲಯದಿಂದ ಶೋಭಾಯಾತ್ರೆ ಆರಂಭಗೊಳ್ಳುತ್ತದೆ. ಶೋಭಾಯಾತ್ರೆಯು ಆಜಾದ್ ಪಾರ್ಕ್ ವೃತ್ತದವರೆಗೆ ನಡೆಯಲಿದ್ದು, ರಾಜ್ಯದ ವಿವಿಧೆಡೆಗಳಿಂದ 5 ಸಾವಿರಕ್ಕೂ ಹೆಚ್ಚು ದತ್ತಮಾಲಾಧಾರಿಗಳು ಆಗಮಿಸಿ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದರು.
ಶೋಭಾಯಾತ್ರೆಯ ನಂತರ ಆಜಾದ್ ಪಾರ್ಕ್ ವೃತ್ತದಲ್ಲಿ ಧಾರ್ಮಿಕ ಸಭೆ ನಡೆಯುವುದು. ಸಭೆಯಲ್ಲಿ 5ಕ್ಕೂ ಹೆಚ್ಚುಜನ ಮಠಾಧೀಶರು, ನಾಗಾಸಾಧುಗಳು, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುಥಾಲಿಕ್ ಪಾಲ್ಗೊಳ್ಳುವರು ಎಂದರು. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ದುರ್ಗಾಸೇನೆ ಜಿಲ್ಲಾಧ್ಯಕ್ಷೆ ಶಾರದಮ್ಮ ಇತರರು ಉಪಸ್ಥಿತರಿದ್ದರು.