ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮಕ್ಕೆ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲ. ಕೂಡಲೇ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಒದಗಿಸುವಂತೆ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು.
ಜಮಖಂಡಿ ತಾಲೂಕು ಕೊಣ್ಣೂರಿನಿಂದ ಡಿಸಿ ಕಚೇರಿಗೆ ಆಗಮಿಸಿದ್ದ ಗ್ರಾಮದ ನೂರಾರು ಜನರು, ಸರ್ಕಾರ ಹಾಗೂ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಗ್ರಾಮದ ಪ್ರಮುಖರು, ಕೊಣ್ಣೂರು ಗ್ರಾಮದಲ್ಲಿ ಸರಿಯಾದ ರಸ್ತೆಗಳಿಲ್ಲ. ಗ್ರಾಮದಿಂದ 5 ಹಳ್ಳಿಗಳಿಗೆ ತೆರಳುವ ಪ್ರಮುಖ ರಸ್ತೆಗಳಿದ್ದು, ಅವುಗಳಿಗೆ ಡಾಂಬರೀಕರಣ ಮಾಡಿಲ್ಲ. ಕಲ್ಲು-ಮಣ್ಣಿನ ರಸ್ತೆಗಳಲ್ಲಿ ಮಳೆ ಬಂದರೆ ಸಾಕು ಸಂಚಾರ ದುಸ್ತರವಾಗುತ್ತದೆ. ಈ ಕುರಿತು ಶಾಸಕರು, ಸರ್ಕಾರ ಹಾಗೂ ತಾಲೂಕು ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೌಚಾಲಯ ಹಣ ದುರ್ಬಳಕೆ: ಕೊಣ್ಣೂರ ಗ್ರಾಮವನ್ನು ಬಯಲು ಶೌಚಮುಕ್ತ ಎಂದು ಘೋಷಣೆ ಮಾಡುವ ಉದ್ದೇಶದಿಂದ ಮನೆ ಮನೆಗೆ ನಿರ್ಮಿತ ಶೌಚಾಲಯ (ರೇಡಮೇಡ್) ಕಲ್ಪಿಸಿದ್ದಾರೆ. ಅವು ಸಂಪೂರ್ಣ ಕಳಪೆಮಟ್ಟದ್ದಾಗಿದ್ದು, ಬಳಕೆಗೆ ಯೋಗ್ಯವಾಗಿಲ್ಲ. ರೇಡಮೇಡ್ ಶೌಚಾಲಯ ನೀಡಿ, ಅಧಿಕಾರಿಗಳು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಆರೋಪಿಸಿದರು.
ಗ್ರಾಮದಲ್ಲಿ 20 ಸಾವಿರಕ್ಕೂ ಹೆಚ್ಚು ಕುರಿ, ದನಕರುಗಳು ಇವೆ. ಅವುಗಳ ಪಾಲನೆ-ಪೋಷಣೆಗಾಗಿ ಕುರಿಗಾಹಿಗಳು ಗ್ರಾಮದ ಗುಡ್ಡದ ಪ್ರದೇಶ ಆಶ್ರಯಿಸಿದ್ದಾರೆ. ಆದರೆ, ಕೆಲವು ರೈತರು, ಶ್ರೀಮಂತರು ಆ ಗುಡ್ಡವನ್ನು ತಮ್ಮ ವೈಯಕ್ತಿಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಕುರಿಗಾರರು, ತಮ್ಮ ಕುರಿಗಳು ಮೇಯಿಸಲು ಸಮಸ್ಯೆ ಅನುಭವಿಸುತ್ತಿದ್ದಾರೆ.
ಕೂಡಲೇ ಗುಡ್ಡವನ್ನು ಕುರಿಗಾರರ ಕುರಿಗಳಿಗಾಗಿ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಗ್ರಾಮದಲ್ಲಿ ಬೀದಿ ದೀಪವಿಲ್ಲ. ಸರಿಯಾದ ಚರಂಡಿ ಇಲ್ಲದಿ. ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಈ ರೀತಿ ಗ್ರಾಮ ಸಮಸ್ಯೆಯಿಂದ ಗ್ರಾಮದ ಅಭಿವೃದ್ಧಿªಗೆ ಕಳಂಕವಾಗಿದೆ ಎಂದರು.
ಗ್ರಾಮದಲ್ಲಿ ಸಾಕಷ್ಟು ನಿರ್ಗತಿಕ ವಯೋವೃದ್ಧರು ಹಾಗೂ ವಿಧವೆಯರಿದ್ದಾರೆ. ಅವರಿಗೆ ಸರ್ಕಾರದಿಂದ ಸಿಗುವ ಪಿಂಚಣಿ ಹಣ ಸರಿಯಾಗಿ ಅವರ ಸಿಗುತ್ತಿಲ್ಲ. ವಯೋವೃದ್ಧರು ಹಾಗೂ ವಿಧವೆಯರಿಗೆ ಮಾಸಾಶನ ಸೌಲಭ್ಯ ಕಲ್ಪಿಸಬೇಕು. ಗ್ರಾಮಸಭೆಯಲ್ಲಿ ಅರ್ಹರನ್ನು ಆಯ್ಕೆ ಮಾಡಬೇಕು. ನಮ್ಮ ಗ್ರಾಮದ ಹಲವು ಸಮಸ್ಯೆಗಳನ್ನು ಸ್ವತಃ ಜಿಲ್ಲಾಧಿಕಾರಿಗಳು ಅರಿಯಲು ಗ್ರಾಮ ವಾಸ್ತವ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಗ್ರಾಮದ ಪ್ರಮುಖರಾದ ಗದಿಗೆಪ್ಪ ಧಾರವಾಡ, ಭೀರಪ್ಪ ಎಣ್ಣಿ, ರಾಯಪ್ಪ ಹೊರಟ್ಟಿ, ಧರಿಯಪ್ಪ ಎಣ್ಣಿ, ಜಯಗೊಂಡ ದಂಡಿನ, ಕರಿಯಪ್ಪ ಮುದಕಪ್ಪನವರ ಮುಂತಾದವರು ಉಪಸ್ಥಿತರಿದ್ದರು.