Advertisement

ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ

11:43 AM Jul 24, 2020 | Suhan S |

ಬಳ್ಳಾರಿ: ಮೆಣಸಿನಕಾಯಿ, ಹತ್ತಿ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ಬಳ್ಳಾರಿಯಲ್ಲಿ ಮೆಣಸಿನಕಾಯಿ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಆಗ್ರಹಿಸಿ ತಾಲೂಕಿನ ಕೋಳೂರು ಗ್ರಾಪಂ ಕಚೇರಿ ಎದುರು ರೈತ ಕೃಷಿ ಕಾರ್ಮಿಕ ಸಂಘಟನೆಯ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಕೋವಿಡ್‌ ಸಂದರ್ಭದಲ್ಲಿ ಬಡ ಕುಟುಂಬಗಳಿಗೆ ಅಗತ್ಯ ಸರಕುಗಳನ್ನು ಖರೀದಿಸಲು ತಿಂಗಳಿಗೆ ಕನಿಷ್ಠ 10,000 ರೂಗಳನ್ನು ತಕ್ಷಣವೇ ಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತಾಯಿಸಿದರು. ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ 12 ಸಾವಿರ ರೂ. ಗೌರವಧನ ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ಕೇಂದ್ರ ಸರ್ಕಾರವು ಆರ್ಥಿಕ ಅಭಿವೃದ್ಧಿ ಹೆಸರಿನಲ್ಲಿ ಅಗತ್ಯ ಸರಕುಗಳ ಕಾಯ್ದೆ 1955ರಡಿ ಅಕ್ಕಿ, ಗೋ , ಧಾನ್ಯಗಳು (ಸೀರಿಯಲ್ಸ್‌), ಆಲೂಗಡ್ಡೆ, ಈರುಳ್ಳಿ ಮತ್ತು ಬೇಳೆ ಕಾಳುಗಳನ್ನು ಅಗತ್ಯ ಸರಕುಗಳ ಪಟ್ಟಿಯಿಂದ ತೆಗೆದು ಹಾಕುವುದರ ಮೂಲಕ ತಿದ್ದುಪಡಿ ಮಾಡಿದೆ. ಇದರಿಂದ ಕಾಳಸಂತೆಕೋರರಿಗೆ ಮತ್ತು ದೊಡ್ಡ ವ್ಯಾಪಾರಿ ಸಂಸ್ಥೆಗಳಿಗೆ ಈ ವಸ್ತುಗಳನ್ನು ದಾಸ್ತನು ಮಾಡಲು ಚಾಣಾಕ್ಷತೆಯಿಂದ ಪೂರೈಕೆ ಮತ್ತು ಬೇಡಿಕೆಯನ್ನು ನಿರ್ವಹಿಸಲು ಮತ್ತು ಗರಿಷ್ಠ ಲಾಭವನ್ನುಗಳಿಸಲು ದಾರಿ ಮಾಡಿಕೊಡುತ್ತದೆ ಎಂದು ಅವರು ಆರೋಪಿಸಿದರು.

ಜಿಲ್ಲಾ ಸಮಿತಿ ಸದಸ್ಯ ಪಂಪಾಪತಿ ಮಾತಾನಾಡಿ, ಒಂದು ರಾಷ್ಟ್ರ ಮತ್ತು ಒಂದು ಮಾರುಕಟ್ಟೆ ಎಂಬ ಹೆಸರಿನಲ್ಲಿ ಹೊಸದಾಗಿ ಜಾರಿಗೊಳಿಸಿರುವ ರೈತರ ಉತ್ಪನ್ನಗಳ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಸುಗ್ರೀವಾಜ್ಞೆ ಕಾಯ್ದೆ 2020 ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಯಾರಾದರೂ, ಎಲ್ಲಿಯಾದರೂ ಔಪಚಾರಿಕ ಪರವಾನಗಿಯಿಲ್ಲದೆ ಖರೀದಿಸಬಹುದು ಎಂದು ಹೇಳುತ್ತದೆ. ಇದರ ಮೇಲೆ ರಾಜ್ಯಗಳಿಗೆ ಯಾವುದೇ ನಿಯಂತ್ರಣವಿರುವುದಿಲ್ಲ. ಈ ಕಾಯಿದೆಯ ಮೂಲಕ, ಈಗಿರುವ ಎಪಿಎಂಸಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ. ಈ ಕಾಯ್ದೆಯು ಕಾರ್ಪೊರೇಟ್‌ ಮನೆಗಳನ್ನು ಹೊರತುಪಡಿಸಿ ಬೇರೆಯವರಿಗೆ ಉಪಯೋಗವಿಲ್ಲ. ಅವರು ಸಂಪೂರ್ಣವಾಗಿ ಮಾರ್ಕೆಟಿಂಗ್‌ ವ್ಯವಸ್ಥೆಯನ್ನು ಆಕ್ರಮಿಸಿಕೊಂಡು ಅದನ್ನು ನಿಯಂತ್ರಿಸುತ್ತಾರೆ ಮತ್ತು ರೈತರು ಎಪಿಎಂಸಿಗಳ ಮೂಲಕ ಇಂದಿನವರೆಗೂ ಪಡೆಯುತ್ತಿರುವ ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಮೆಣಸಿನಕಾಯಿ, ಹತ್ತಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಬಳ್ಳಾರಿಯಲ್ಲಿ ಮೆಣಸಿನಕಾಯಿ ಖರೀದಿ ಕೇಂದ್ರ ತೆರೆಯಬೇಕು ಎಂದವರು ಆಗ್ರಹಿಸಿದ್ದಾರೆ.

ಬಳಿಕ ಗ್ರಾಪಂ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಶೇಖಣ್ಣ, ಗೋವಿಂದ, ಆನಂದಪ್ಪ, ಗಾ ಲಿಂಗ, ರವಿಚಂದ್ರ ಸೇರಿದಂತೆ ಇತರರು ಇದ್ದರು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next