ರಾಮನಗರ: ಡಾ.ಬಿ.ಆರ್. ಅಂಬೇಡ್ಕರ್ ಬಗ್ಗೆ ಸಾರ್ವಜನಿಕರು ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಅನುಮಾನ ಹುಟ್ಟಿಸುವಂತ ಕೆಲಸವನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯ ಮೂಲಕ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ಪರಿಶಿಷ್ಟ ವಿಭಾಗದ ಅಧ್ಯಕ್ಷ ರಾಂಪುರ ನಾಗೇಶ್ ದೂರಿದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಮತ್ತು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರುಗಳು ಬಾಬಾ ಸಾಹೇಬ್ ಅಂಬೇಡ್ಕರ್ ವಿರೋಧಿ ಧೋರಣೆ ತಳೆದಿದ್ದಾರೆ ಎಂದು ಆರೋಪಿಸಿ ನಗರದ ಐಜೂರು ವೃತ್ತದಲ್ಲಿ ನಡೆದ ಪ್ರತಿಭಟನೆಯ ವೇಳೆ ಅವರ ಮಾತನಾಡಿದರು. ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು ಹಾಗೂ ದಲಿತ ವಿರೋಧಿ ನೀತಿಗಳನ್ನು ಜಾರಿ ಮಾಡಲು ಹೊರಟಿರುವ ಶಿಕ್ಷಣ ಸಚಿವ ಸುರೇಶ್ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ ಎಂಬುದು ಈಗಾಗಲೆ ಎಲ್ಲರಿಗೂ ಗೊತ್ತಿರುವ ವಿಚಾರ. ಅನೇಕ ಸಂದರ್ಭಗಳಲ್ಲಿ ಇದು ನಿರೂಪಿತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬಿಜೆಪಿ ಸರ್ಕಾರದಲ್ಲಿ ಕೆಲವು ಅಧಿಕಾರಿಗಳು ಬಾಬಾ ಸಾಹೇಬರ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಠಿಸಲು ಮುಂದಾಗಿದ್ದಾರೆ.
ಬಾಬಾ ಸಾಹೇಬರಿಗೆ ಕಳಂಕ ತರುವ ಅಂಶಗಳು ಉಳ್ಳ ಆದೇಶವನ್ನು ಹೊರೆಡಿಸಿದ್ದ ಅಧಿಕಾರಿ ಉಮಾಶಂಕರ್ ಅವರನ್ನು ಉಳಿಸಿಕೊಳ್ಳಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಯತ್ನಿಸುತ್ತಿರುವುದು ದಲಿತ ವಿರೋದಿ ಧೋರಣೆ ಎಂದು ಅವರು ಜರಿದಿದ್ದಾರೆ. ಉಮಾಶಂಕರ್ ಅವರನ್ನು ಉಳಿಸಿಕೊಂಡು, ಕೆಲವು ಕೆಳ ವರ್ಗದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ, ಆದೇಶ ಹಿಂಪಡೆದಿದ್ದೇವೆ ಎಂದು ಟೀಕಾ ಪ್ರಹಾರ ನಡೆಸಿದರು.
ಪ್ರತಿಕೃತಿ ದಹಿಸಿ ಆಕ್ರೋಶ: ಸಚಿವರು ನೈತಿಕ ಹೊಣೆ ಒತ್ತು ರಾಜೀನಾಮೆ ನೀಡಬೇಕು. ಭ್ರಷ್ಟ ಅಧಿಕಾರಿಯನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಆಸ್ತಿತ್ವಕ್ಕೆ ಬಂದಾಗಿನಿಂದಲೂ ಟಿಪ್ಪು ಜಯಂತಿ ಸೇರಿದಂತೆ ಮಹಾತ್ಮ ಗಾಂಧೀಜಿಯವರನ್ನು ಅಪಮಾನಗೊಳಿಸುವಲ್ಲಿ ನಿರತರಾಗಿದ್ದಾರೆ ಎಂದರು.
ಇದೇ ವೇಳೆ ಕಾರ್ಯಕರ್ತರು ಸಚಿವ ಸುರೇಶ್ ಕುಮಾರ್ ಮತ್ತು ಅಧಿಕಾರಿ ಉಮಾಶಂಕರ್ ಅವರ ಪ್ರತಿಕೃತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಹಾರೋಹಳ್ಳಿ ಕುಮಾರ್, ಧನಂಜಯ್, ಶ್ರೀನಿವಾಸ ಮೂರ್ತಿ, ಶಿವಲಿಂಗಯ್ಯ, ವೆಂಕಟಸ್ವಾಮಿ, ವಿ.ರಾಜು, ಮಲ್ಲಳ್ಳಿ ಶಿವು, ಮರಿಯಪ್ಪ ಸೇರಿ ಹಲವರು ಹಾಜರಿದ್ದರು.