Advertisement

ಕೆರೆ ದುರಸ್ತಿಗೆ ಒತ್ತಾಯಿಸಿ ಪ್ರತಿಭಟನೆ

05:27 PM May 11, 2022 | Team Udayavani |

ಕಾರವಾರ: ಕೋಟ್ಯಂತರ ರೂ. ಹಣ ಮಂಜೂರಾದರೂ ಕೆರೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ತಾಲೂಕಿನ ಮುಡಗೇರಿ ಗ್ರಾ.ಪಂ ಎದುರು ಸ್ಥಳೀಯರು ಹಾಗೂ ಪಂಚಾಯತಿ ಸದಸ್ಯರು ಗಾಂಧೀಜಿ ಭಾವಚಿತ್ರ ಇಟ್ಟು ಪ್ರತಿಭಟನೆ ನಡೆಸಿದರು.

Advertisement

ಕಳೆದ 40 ವರ್ಷಗಳ ಹಿಂದೆ ಮುಡಗೇರಿ ಗ್ರಾ.ಪಂ. ಸುತ್ತಮುತ್ತಲಿನ ಪ್ರದೇಶದ ಕೃಷಿ ಭೂಮಿಗಳಿಗೆ ಅನುಕೂಲವಾಗುವಂತೆ ಅರ್ಥಲಾವ ಕೆರೆ ನಿರ್ಮಾಣ ಮಾಡಲಾಗಿತ್ತು. ಆದರೆ ಕಳೆದ ಹಲವು ವರ್ಷಗಳಿಂದ ಕೋಟ್ಯಂತರ ರೂ. ಮಂಜೂರಿಯಾದರೂ ಕೂಡ ಅರೆಬರೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರು, ಪೂರ್ಣ ಕಾಮಗಾರಿ ನಡೆಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮುಡಗೇರಿ ವ್ಯಾಪ್ತಿಯಲ್ಲಿ ಸರ್ಕಾರಿ ಯೋಜನೆಗಳು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಭ್ರಷ್ಟಾಚಾರಕ್ಕೆ ಮಾರ್ಗವಾಗಿದೆ. ಈ ಭಾಗದಲ್ಲಿ ಕೈಗೊಳ್ಳುವ ಕಾಮಗಾರಿಗಳನ್ನು ಅರೆಬರೆ ನಡೆಸಿ ಹಣ ಲಪಟಾಯಿಸಲಾಗುತ್ತಿದೆ. ಅರ್ಥಲಾವ ಕೆರೆಯ ಹೂಳು ಎತ್ತುವುದು, ಕಾಲುವೆ ನಿರ್ಮಾಣ, ಗೇಟ್‌ ದುರಸ್ತಿಗೆ 2012-13 ರಲ್ಲಿ 95 ಲಕ್ಷ ಅನುದಾನ ನೀಡಲಾಗಿತ್ತು. ಆದರೆ ಹೂಳು ಎತ್ತಿದ್ದು ಹೊರತುಪಡಿಸಿದರೆ ಯಾವ ಕೆಲಸವನ್ನೂ ಮಾಡಿಲ್ಲ. ಗೇಟ್‌ ಹಾಗೂ ಕಾಲುವೆ ದುರಸ್ತಿಗೆ 40 ಲಕ್ಷ ಮೀಸಲಿದ್ದರೂ ಕೆಲಸ ಮಾಡಿರಲಿಲ್ಲ. ಆದರೆ ಸರ್ಕಾರ 2018-19ರಲ್ಲಿ ಕೆರೆ ದುರಸ್ತಿಗೆ ಮತ್ತೆ ಒಂದು ಕೋಟಿ ರೂ. ಅನುದಾನ ನೀಡಿದೆ. ಕೆರೆಯ ಎರಡೂ ಬದಿ ಗೇಟ್‌ ದುರಸ್ತಿ ಹಾಗೂ ಕಾಲುವೆ ನಿರ್ಮಾಣಕ್ಕೆ ಸೂಚಿಸಿ ಜೂನ್‌ 2021ಕ್ಕೆ ಪೂರ್ಣಗೊಳಿಸಿಲು ಗಡವು ನೀಡಲಾಗಿತ್ತು. ಆದರೆ ಅರೆಬರೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ಈವರೆಗೂ ಇತ್ತ ಮುಖ ಹಾಕಿಲ್ಲ. ಕೆರೆ ದುರಸ್ತಿ ಕಾಣದ ಕಾರಣ ನೀರು ಸಿಗದೆ ಈ ಭಾಗದ ರೈತರು ಈ ಬಾರಿ ಸುಮಾರು 80 ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯದೆ ಭೂಮಿ ಪಾಳು ಬಿಟ್ಟಿದ್ದಾರೆ ಎಂದು ಎಂದು ನಂದಕಿಶೋರ್‌ ಆರೋಪಿಸಿದರು.

ಕೆರೆ ನಿರ್ವಹಣೆ ಆಗದ ಕಾರಣ ನೀರು ಸರಿಯಾಗಿ ಶೇಖರಣೆ ಆಗುತ್ತಿಲ್ಲ. ಸರ್ಕಾರದಿಂದ ಬಂದ ಅನುದಾನದಲ್ಲಿ ಸಾಕಷ್ಟು ಭ್ರಷ್ಟಾಚಾರ ಆಗಿದೆ. ಈ ಬಗ್ಗೆ ಎಸಿಬಿಗೂ ದೂರು ನೀಡಿದ್ದು, ತನಿಖೆ ಆಗಬೇಕು. ಗೇಟ್‌ ಬಳಿ ಲೀಕೆಜ್‌ ಇದ್ದು ನೀರು ಸಂಗ್ರಹವಾಗುತ್ತಿಲ್ಲ. ಕೂಡಲೇ ಗೇಟ್‌ ಅಳವಡಿಸಲು ಸಣ್ಣ ನೀರಾವರಿ ಇಲಾಖೆ ಗಮನ ಹರಿಸಬೇಕು ಎಂದು ಮಾರುತಿ ನಾಯ್ಕ ಆಗ್ರಹಿಸಿದರು.

ಧರಣಿ ಸ್ಥಳಕ್ಕೆ ಬಂದ ಅಧಿಕಾರಿ

Advertisement

ಸಣ್ಣ ನೀರಾವರಿ ಇಲಾಖೆ ಎಇಇ ವಿನೋದ ನಾಯ್ಕ, ಪ್ರತಿಭಟನಾಕಾರರ ಬೇಡಿಕೆ ಆಲಿಸಿದರು. ಕೊರೊನಾದಿಂದಾಗಿ ಮತ್ತು ಕೆರೆಯಲ್ಲಿ ನೀರು ಇರುವ ಕಾರಣ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ ಎಂದು ಸಬೂಬು ನೀಡಲು ಮುಂದಾದಾಗ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗುತ್ತಿಗೆದಾರರು ಈ ಭಾಗದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೂಡಲೇ ಕಾಮಗಾರಿ ನಡೆಸಲು ಸೂಚಿಸಬೇಕು ಇಲ್ಲವೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮುಂದಿನ ತಿಂಗಳ ಅಂತ್ಯದ ಒಳಗೆ ದುರಸ್ತಿ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ನಿಶ್ಚಲ್‌ ನರೋನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವಿ ಆಲಿಸಿ ಕೆರೆ ಪರಿಶೀಲನೆ ನಡೆಸಿದರು.

ಗ್ರಾ.ಪಂ. ಅಧ್ಯಕ್ಷೆ ಶಿಮಾ ಗೋಕುಲದಾಸ್‌ ನಾಯ್ಕ, ಉಪಾಧ್ಯಕ್ಷ ಸುನೀಲ್‌ ನಾಯ್ಕ, ಜ್ಯೋತಿ ಚೋಳಾರ್‌, ಆರತಿ ಬಾನಾವಳಿ, ಚಂದ್ರಕಾಂತ ತೆಂಡೂಲಕರ್‌, ಅನಿಲ್‌ ದೇಸಾಯಿ, ವಿಲಾಸ್‌ ದೇಸಾಯಿ, ರಾಜು ಬಾನಾವಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next