ಅಥಣಿ: ಗುಂಡೆವಾಡಿ ಗ್ರಾಮದ ಪಿಕೆಪಿಎಸ್‌ನಲ್ಲಿ ನಡೆದ ಚುನಾವಣೆಯಲ್ಲಿ ಖೊಟ್ಟಿ ಮತದಾನ ವಿರೋಧಿಸಿ ಹಾಗೂ ಮರು ಮತದಾನಕ್ಕೆ ಆಗ್ರಹಿಸಿ ಪಿಕೆಪಿಎಸ್ ಕಚೇರಿ ಬಂದ್ ಮಾಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಅ.20ರಂದು ಗುಂಡೆವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ನಡೆದ ಸಂದರ್ಭದಲ್ಲಿ 400ಕ್ಕೂ ಹೆಚ್ಚು ಖೊಟ್ಟಿ ಮತದಾನ ನಡೆದಿದೆ. ಇದಕ್ಕೆಲ್ಲ ಕಾರಣ ಸಂಘದ ಕಾರ್ಯದರ್ಶಿ ಕಾಶಿನಾಥ ಕವಟೇಕರ ಮತ್ತು ಚುನಾವಣಾ ಧಿಕಾರಿ ಸೇರಿ ಇಲ್ಲಿ ಖೊಟ್ಟಿ ಮತದಾನಕ್ಕೆ ಕಾರಣಿಕರ್ತರಾಗಿದ್ದಾರೆಂದು ಆರೋಪಿಸಿ ನೂರಾರು ಗ್ರಾಮಸ್ಥರು ಸಿಡಿಒ ವಿನಾಯಕ ಲಕ್ಷಾಣೆ ಅವರನ್ನು ಸಂಘದ ಕಚೇರಿಯಲ್ಲಿ ಕೂಡಿಹಾಕಿ ಆಕ್ರೋಶ ವ್ಯಕ್ತ ಪಡಿಸಿದರು.
ಈ ವೇಳೆ ಗ್ರಾಮದ ಮುಖಂಡ ಹಾಗೂ ಪಿ.ಕೆ.ಪಿ.ಎಸ್ ಮಾಜಿ ಸದಸ್ಯ ಬಸವರಾಜ ಅಂಗಡಿ ಮಾತನಾಡಿ, ಸಂಘದ ಚುನಾವಣೆ ಸಂದರ್ಭದಲ್ಲಿ ಮಹಾರಾಷ್ಟ್ರದ ಜತ್ತ ಹಾಗೂ ಕರ್ನಾಟಕದ ಚಿಕ್ಕೋಡಿ, ಜಮಖಂಡಿ, ರಾಯಬಾಗ ಸೇರಿದಂತೆ ಇನ್ನುಳಿದ ಕಡೆಯಿಂದ ಜನರನ್ನು ಕರೆಸುವ ಮೂಲಕ ಖೊಟ್ಟಿ ಮತದಾನ ಮಾಡಿಸಿ ಚುನಾವಣೆಗೆ ಕಳಂಕ ತಂದಿದ್ದಾರೆ. ಖೋಟ್ಟಿ ಮತದಾನದ ಕುರಿತು ಸಂಭಂದ ಪಟ್ಟ ಅಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಗ್ರಾಮದ ಪಿ.ಕೆ.ಪಿ.ಎಸ್ ಕಾರ್ಯದರ್ಶಿ ಸಾಲಗಾರ ಮತದಾರರ ಯಾದಿಯಲ್ಲಿ ಸಾಲ ಪಡೆಯದ ಸುಮಾರು 192 ಸಾಲಗಾರರ ಹೆಸರನ್ನು ಸೇರ್ಪಡೆ ಮಾಡಿದ್ದಾರೆ. ಅದರೆ ಸದಸ್ಯರು ಸಾಲ ತೆಗೆದ ವಿಷಯ ಅವರಿಗೆ ಗೊತ್ತಿಲ್ಲ. ಆದರೂ ಅವರನ್ನು ಸಾಲಗಾರನ್ನಾಗಿ ಮಾಡಿದ್ದಾರೆ. ಒಂದೇ ದಿನದಲ್ಲಿ 192 ಜನರನ್ನು ಸಾಲಗಾರನ್ನಾಗಿ ಮಾಡಿ ಮತದಾರರ ಯಾದಿಯಲ್ಲಿ ಖೊಟ್ಟಿ ಸದಸ್ಯರನ್ನಾಗಿಸಿದ್ದಾರೆ. ಇಂತಹ ಅವ್ಯವಹಾರದಲ್ಲಿ ತೊಡಗಿದ ಕಾರ್ಯದರ್ಶಿಯನ್ನು ಕೂಡಲೇ ಪಿಕೆಪಿಎಸ್‌ದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದವರು.
ಈ ವೇಳೆ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಗುಂಜಿಗಾಂವಿ, ವಿಶ್ವನಾಥ ಪಾಟೀಲ, ಇಲಾಯಿ ಮುಜಾವರ, ಅಬಾ ಚವಾಣ, ರಾಮಗೌಡ ಪಾಟೀಲ, ಸುಭಾಸ ಗೋಕಾಕ ಸೇರಿದಂತೆ ಇತರರು ಇದ್ದರು.