ಬಾಗಲಕೋಟೆ: ಜಿಲ್ಲೆಯ ತೇರದಾಳ ಸಮೀಪದ ಸಾವರಿನ್ ಸಕ್ಕರೆ ಕಾರ್ಖಾನೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಕಬ್ಬು ಪೂರೈಸಿದ ಎಲ್ಲ ರೈತರಿಗೆ ಕೂಡಲೇ ಬಾಕಿ ಹಣ ಕೊಡಿಸಬೇಕು ಎಂದು ಆಗ್ರಹಿಸಿ ಹತ್ತಕ್ಕೂ ಹೆಚ್ಚು ಹಳ್ಳಿಗಳ ರೈತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಮುಧೋಳ, ಜಮಖಂಡಿ, ರಬಕವಿ-ಬನಹಟ್ಟಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಇದೇ ವೇಳೆ ಕಾರ್ಖಾನೆಯಿಂದ ನೀಡಿದ್ದಚೆಕ್‌ಗಳು ಬೌನ್ಸ್ ಆಗಿದ್ದ ಚೆಕ್‌ಗಳನ್ನು ಪ್ರದರ್ಶಿಸಿ, ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರೈತ ಪ್ರಮುಖರು ಮಾತನಾಡಿ, ತೇರದಾಳದ ಸಾವರಿನ್ ಸಕ್ಕರೆ ಕಾರ್ಖಾನೆಗೆ ಕಳೆದ 2018ರ ಡಿಸೆಂಬರ್‌ನಲ್ಲಿ ಮಾರಾಪುರ, ಮದಬಾವಿ, ಕಾನಟ್ಟಿ, ಮುನ್ಯಾಳ, ರಂಗಾಪುರ, ಸೈದಾಪುರ, ಬೆಳಗಲಿ, ಮಹಾಲಿಂಗಪುರ ಸೇರಿದಂತೆ ಹಲವು ಗ್ರಾಮಗಳ ರೈತರು ಕಬ್ಬು ಪೂರೈಸಿದ್ದೇವೆ. ನಾವು ಪೂರೈಸಿದ ಕಬ್ಬಿನ ಬಿಲ್‌ಗಾಗಿ ಕಾರ್ಖಾನೆಯಿಂದ ಚೆಕ್ ನೀಡಿದ್ದು, ಎಲ್ಲ ಚೆಕ್‌ಗಳು ಬೌನ್ಸ್ ಆಗಿವೆ. ಇದನ್ನು ಕೇಳಲು ಹೋದರೆ ಕಾರ್ಖಾನೆಯಲ್ಲಿ ಯಾರೂ ಇಲ್ಲ. ಕಷ್ಟಪಟ್ಟು ಬೆಳೆದ ಕಬ್ಬಿನ ಬಿಲ್ ಬಾರದೇ ರೈತರೆಲ್ಲ ಸಂಕಷ್ಟದಲ್ಲಿದ್ದೇವೆ. ರೈತರಿಗೆ ಮೋಸ ಮಾಡಿದ ಕಾರ್ಖಾನೆಯ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ನಮಗೆ ಬಾಕಿ ಕೊಡಿಸಬೇಕು ಎಂದು ಆಗ್ರಹಿಸಿದರು.
ಸಾವಿರಾರು ರೈತರಿಗೆ 4 ಕೋಟಿಗೂ ಅಧಿಕ ಬಾಕಿ ಕೊಡಬೇಕಿದೆ. ಕಬ್ಬಿನ ಬಿಲ್‌ಗಾಗಿ ಕಾಯ್ದು ಸುಸ್ತಾಗಿರುವ ರೈತರು, ದಿಕ್ಕು ತೋಚದೇ ಆತಂಕದಲ್ಲಿದ್ದಾರೆ. ಈ ಕುರಿತು ಹಲವು ಬಾರಿ ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ನೀಡಿದರೂ ಕೇವಲ ಭರವಸೆ ಸಿಗುತ್ತಿದೆ ಹೊರತು, ಕಬ್ಬಿನ ಬಿಲ್ ದೊರೆಯುತ್ತಿಲ್ಲ. ಜಿಲ್ಲಾಡಳಿತ ಕೂಡಲೇ ರೈತರ ಬಾಕಿ ಕೊಡಿಸದಿದ್ದರೆ ಇಲ್ಲಿಯೇ ಆಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತರ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ರಾಜೇಂದ್ರ, ಸಾವರಿನ್ ಸಕ್ಕರೆ ಕಾರ್ಖಾನೆ ರೈತರಿಗೆ ಸುಮಾರು 4. 38 ಕೋಟಿಯಷ್ಟು ಬಾಕಿ ಕೊಡಬೇಕಿದೆ.ಸಕ್ಕರೆ ಹರಾಜು ಮಾಡಿ ರೈತರ ಬಾಕಿ ಕೊಡಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಕಾರ್ಖಾನೆಯ ಗೋಡಾವನ್‌ನಲ್ಲಿ ಸಕ್ಕರೆ ಇರಲಿಲ್ಲ. ಹೀಗಾಗಿ ಕಾರ್ಖಾನೆಯ ಸ್ಥಿರಾಸ್ಥಿ ಹರಾಜು ಹಾಕಿ, ನಿಯಮಾವಳಿ ಪ್ರಕಾರ ರೈತರ ಬಾಕಿ ಕೊಡಲು ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಜಮಖಂಡಿಯ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದ್ದು, ಕಾರ್ಖಾನೆ ಹರಾಜು ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಅಲ್ಲಿಯವರೆಗೆ ರೈತರು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡಿದರು. ವಿವಿಧ ಗ್ರಾಮಗಳ ರೈತರಾದ ಸಿದ್ದಪ್ಪ ತಂಬೂರಿ, ಸುಭಾಸ ಬಿರಾಣಿ, ಪೀರಸಾಬ ನದಾಫ, ಪ್ರವೀಣ ಕುಳ್ಳೊಳ್ಳಿ, ಮಲಕಾರಿ ಮಿರ್ಜಿ, ದುಂಡಪ್ಪ ಬಿದರಮಟ್ಟಿ, ಮುದಕಪ್ಪ ಕೆಂಚರಡ್ಡಿ, ಎಸ್.ಜಿ. ಬೋರಟ್ಟಿ, ಸೈದು ಹುಲಕಟ್ಟಿ, ಆರ್.ಎಲ್. ತಿಮ್ಮಾಪುರ, ಆರ್.ಡಿ. ಕುದರಿ, ಎಸ್.ಎ. ತೇಲಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.