Advertisement

ಬಾಕಿ ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

06:27 PM Jun 28, 2022 | Team Udayavani |

ರಾಯಚೂರು: ಅಂಗನವಾಡಿ ನೌಕರರ ಮೂರು ತಿಂಗಳಿನಿಂದ ಬಾಕಿ ಇರುವ ವೇತನ, ತರಕಾರಿ ಬಿಲ್‌ ಮತ್ತು ಕೇಂದ್ರಗಳ ಬಾಡಿಗೆ ಹಣ ಕೂಡಲೇ ಬಿಡುಗಡೆಗೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕಳೆದ ಮೂರು ತಿಂಗಳಿಂದ ವೇತನವಿಲ್ಲದೇ ಕೇಂದ್ರಗಳ ಬಾಡಿಗೆ ಹಣವಿಲ್ಲದೇ ತೀವ್ರ ಸಂಕಷ್ಟದ ಜೀವನ ಎದುರಿಸುತ್ತಿದ್ದಾರೆ. ಪ್ರತಿ ವರ್ಷ ಮಾರ್ಚ್‌ನಿಂದ ಮೇ ವರೆಗೆ ಈ ರೀತಿ ಸಮಸ್ಯೆ ಎದುರಾಗುತ್ತಿದೆ. ಆದರೆ, ಈ ವರ್ಷ ಜೂನ್‌ ತಿಂಗಳಾದರೂ ಗೌರವಧನ ಪಾವತಿಸಿಲ್ಲ. ಕಾರಣ ಕೇಳಿದರೆ ಇಲಾಖೆ ಉಪ ನಿರ್ದೇಶಕರು ಅನುದಾನವಿಲ್ಲ ಎನ್ನುತ್ತಾರೆ. ಕೇಂದ್ರ ಕಚೇರಿಯಲ್ಲಿ ಕೇಳಿದರೆ ವೇತನ ಪಾವತಿ ಮಾಡುವ ವಿಧಾನ ಬದಲಾವಣೆ ಆಗಿದೆ ಎನ್ನುತ್ತಾರೆ. ಕೇಂದ್ರ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡದೇ ಸತಾಯಿಸುತ್ತಿರುವುದು ಸರಿಯಲ್ಲ ಎಂದು ದೂರಿದರು.

ಅಂಗನವಾಡಿ ನೌಕರರು ಇನ್ನು ಎಷ್ಟು ತಾಳ್ಮೆಯಿಂದ ವರ್ತಿಸಬೇಕು. ಮಾದರಿ ಆಡಳಿತ ನೀಡುವ ಸರ್ಕಾರಗಳೇ ಅನುದಾನದ ನೆಪದಲ್ಲಿ ಸರಿಯಾಗಿ ವೇತನ ಕೊಡದೇ ದುಡಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ?. ಐಎಲ್‌ಸಿಯ ಉದ್ದೇಶಗಳು ಮತ್ತು ಕಾನೂನುಗಳ ಉಲ್ಲಂಘನೆಯಲ್ಲವೇ ?. ಕೂಡಲೇ ಮೂರು ತಿಂಗಳಿಂದ ಬಾಕಿ ಇರುವ ನೌಕರರ ವೇತನ, ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ಮತ್ತು ಜೂನ್‌ ದಿಂದ ಆಗಸ್ಟ್‌ವರೆಗೆ ಮುಂಗಡವಾಗಿ ತರಕಾರಿ ಬಿಲ್‌ ಬಿಡುಗಡೆ ಮಾಡಬೇಕು. 2-3 ದಿನದೊಳಗಾಗಿ ಸಮಸ್ಯೆ ಪರಿಹರಿಸದಿದ್ದಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಬಂದ್‌ ಮಾಡಿ ಮುಷ್ಕರ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷೆ ಎಚ್‌. ಪದ್ಮಾ, ತಾಲೂಕು ಕಾರ್ಯದರ್ಶಿ ನರ್ಮದಾ, ರಂಗಮ್ಮ, ಅನ್ವರ್‌, ನರ್ಮದಾ, ವರಲಕ್ಷ್ಮೀ, ರಹೆಮತ್‌, ಆದಿಲಕ್ಷ್ಮೀ, ಆಸ್ಮಾ, ಕೃಷ್ಣವೇಣಿ, ನಾಗಮ್ಮ, ರೇಖಾ, ಭಾಗ್ಯಲಕ್ಷ್ಮೀ, ಗೋಕರಮ್ಮ, ಡಿ.ಎಸ್‌. ಶರಣಬಸವ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next