ದೊಡ್ಡಬಳ್ಳಾಪುರ: ಪಶು ಆಹಾರದ ಬೆಲೆ ದಿನೇ ದಿನೆ ಹೆಚ್ಚಾಗುತ್ತಿದ್ದರೂ ಹಾಲಿನ ದರ ಮಾತ್ರ ಅವೈಜ್ಞಾನಿಕವಾಗಿದೆ. ಈ ದಿಸೆಯಲ್ಲಿ ಹಾಲಿನ ಬೆಲೆ ಏರಿಕೆಗೆ ಆಗ್ರಹಿಸಿ ನ.8ರಂದು ರಾಜಾನುಕುಂಟೆಯ ಕೆಎಂಎಫ್ ಪಶು ಆಹಾರ ಘಟಕದ ಮುಂದೆ ಅನಿರ್ಧಿಷ್ಟಾವಧಿ ಧರಣಿ ಪ್ರಾರಂಭಿಸಲಾಗುತ್ತಿದೆ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಪಶು ಆಹಾರದ ಬೆಲೆಯನ್ನು ಏಕಾಏಕಿ ಒಂದು ಟನ್‌ಗೆ 3.5 ಸಾವಿರ ರೂ. ಏರಿಕೆ ಮಾಡಲಾಗಿದೆ. ಹಾಲಿನ ಬೆಲೆ ಮಾತ್ರ ಏರಿಕೆ ಮಾಡದೇ ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಒಕ್ಕೂಟವು ಗ್ರಾಹಕರಿಗೆ ಮಾರಾಟ ಮಾಡುತ್ತಿರುವ ಹಾಲಿಗೂ, ರೈತರಿಂದ ಖರೀದಿಸುತ್ತಿರುವ ಹಾಲಿನ ಬೆಲೆ ನಡುವೆ 15 ರೂ. ವ್ಯತ್ಯಾಸವಿದೆ. ಕೆಎಂಎಫ್ ಅಧಿಕಾರಿಗಳು ರೈತರೊಂದಿಗೆ ಚರ್ಚಿಸಿ, ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವವರೆಗೂ ಧರಣಿ ಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದರು.
ನಿರ್ವಹಣೆಗಾಗಿ ಕೋಟ್ಯಂತರ ರೂ. ವೆಚ್ಚ: ಹಾಲು ಒಕ್ಕೂಟವು ಆಡಳಿತ ನಿರ್ವಹಣೆಗಾಗಿಯೇ ಅನಗತ್ಯವಾಗಿ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಆದರೆ, ರೈತರಿಗೆ ಮಾತ್ರ ನ್ಯಾಯಯುತವಾದ ದರ ನೀಡುತ್ತಿಲ್ಲ, ಗ್ರಾಹಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿದೆ. ಗೋ ಶಾಲೆಗಳನ್ನು ಪ್ರಾರಂಭಿಸಿದರೆ ಸರ್ಕಾರ ಶೆ.50ರಷ್ಟು ಸಹಾಯಧನ ನೀಡುತ್ತಿದೆ. ಆದರೆ, ರೈತರು ಸರ್ಕಾರದಿಂದ ಯಾವುದೇ ಸಬ್ಸಿಡಿ ಪಡೆಯದೇ ಹೈನುಗಾರಿಕೆ ಮಾಡಿದರು ಹಾಲಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಗ್ರಾಮೀಣ ಜನರ ಆರ್ಥಿಕ ಜೀವನಾಡಿಯಾಗಿರುವ ಹೈನುಗಾರಿಕೆ ಯನ್ನು ಸಣ್ಣ ಹಿಡುವಳಿದಾರ ರೈತ ಕೈತಪ್ಪಿಸುವ ಹುನ್ನಾರ ಪ್ರಾರಂಭವಾಗಿದೆ ಎಂದು ಹೇಳಿದರು.
ಬಿಜೆಪಿ ರೈತರ ಪರವಾಗಿ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಯನ್ನು ಹಿಂದಕ್ಕೆ ಪಡೆದರು ಸಹ ರಾಜ್ಯದಲ್ಲಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಕ್ಕೆ ಬದಲಾಗಿ ಮತ್ತಷ್ಟು ವೇಗವಾಗಿ ಜಾರಿಗೊಳಿಸಲಾಗುತ್ತಿದೆ. ಭೂ ಸುಧಾರಣೆ ತಿದ್ದುಪಡಿಯಿಂದಾಗಿ ಕೃಷಿ ಭೂಮಿ ಬಂಡವಾಳ ಶಾಹಿಗಳ ಕೈ ಸೇರುತ್ತಿದೆ. ಹಾಲಿನ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ನ.8ರಂದು ನಡೆಯಲಿರುವ ಧರಣಿಯಲ್ಲಿ ಬೆಂಗಳೂರು ಹಾಲು ಒಕ್ಕೂಟ ವ್ಯಾಪ್ತಿಯ ಐದು ಜಿಲ್ಲೆಗಳ ಹಾಲು ಉತ್ಪಾದಕರು ಭಾಗವಹಿಸಲಿದ್ದಾರೆ. ಎಂದರು.
ರಾಜ್ಯ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆಂಚಪ್ಪಗೌಡ, ಕಾರ್ಯದರ್ಶಿ ಬೈರೇಗೌಡ, ಜಿಲ್ಲಾ ಕಾರ್ಯದರ್ಶಿ ಆರ್.ಪ್ರಸನ್ನ, ಮುಖಂಡರಾದ ಸತೀಶ್, ಶಿವರಾಜ್, ಮಹದೇವ್, ಸುರೇಶ್, ಮಾಳಪ್ಪ, ಬಸವರಾಜು, ಶ್ರೀನಿವಾಸ್ ಹಾಜರಿದ್ದರು.