ಹುಮನಾಬಾದ: ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಮಾದಿಗ ದಂಡೋರ ಜಿಲ್ಲಾ ಸಮಿತಿಯಿಂದ ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರೀಯ ಹೆದ್ದಾರಿ 65 ತಡೆದು ಪ್ರತಿಭಟನೆ ನಡೆಸಲು ಮುಂದಾದ ಸಂದರ್ಭದಲ್ಲಿ 30ಕ್ಕೂ ಅಧಿಕ ಮುಖಂಡರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ನೂರಾರು ವರ್ಷಗಳಿಂದ ಶೋಷಣೆಗೆ ಒಳಪಟ್ಟ ಸಮುದಾಯ ಹಕ್ಕಿಗಾಗಿ ಬೀದಿಗಿಳಿದಿದೆ. ಸರ್ಕಾರ ಸಮಸ್ಯೆ ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯ. ಸರ್ಕಾರ ಪರಿಶಿಷ್ಟ ಜಾತಿಯೊಳಗಿನ ಮೀಸಲಾತಿ ಸರಿಪಡಿಸಿ ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣ ಮಾಡಲು ಸದಾಶಿವ ಆಯೋಗ ರಚಿಸಿತ್ತು. ಆಯೋಗವು ಗಣತಿ ನಡೆಸಿ ಮಾದಿಗ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದೆ. ವಿಧಾನಸಭೆಗಳಿಗೆ ಪರಿಶಿಷ್ಟ ಜಾತಿ-ಪಂಗಡಗಳಿಗೆ ಒಳ ಮೀಸಲಾತಿ ವರ್ಗೀಕರಣ ಮಾಡಲು ಅಧಿಕಾರವಿದೆ ಸುಪ್ರೀಂಕೋರ್ಟ್ ತೀರ್ಪು ಕೂಡ ನೀಡಿದೆ. ಕೂಡಲೇ ರಾಜ್ಯ ಸರ್ಕಾರ ಮಾದಿಗರ ಬೇಡಿಕೆ ಈಡೇರಿಸುವ ಜೊತೆಗೆ ರಾಜ್ಯದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರ ಪ್ರಾಂಗಣದಲ್ಲಿ ಜಮಾಗೊಂಡಿದ್ದ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಮಾದಿಗ ಸಮುದಾಯದ ಪ್ರತಿಭಟನಾಕಾರರು ಕೆಲಹೊತ್ತು ಪ್ರವಾಸಿ ಮಂದಿರ ಪ್ರಾಂಗಣದಲ್ಲಿ ಪ್ರತಿಭಟನೆ ನಡೆಸಿದರು.
ನಂತರ ಪ್ರವಾಸಿ ಮಂದಿರ ಹೊರಗಡೆ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದರು. ನಂತರ ಪ್ರತಿಭಟನಾಕಾರರು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೀದರ ಹೆಚ್ಚುವರಿ ಪೊಲೀಸ್ ಅಧಿಕಾರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್ ಒದಗಿಸಿದ್ದರು. ಈ ವೇಳೆ ಜಿಲ್ಲಾಧ್ಯಕ್ಷ ಪ್ರದೀಪ ಹೆಗಡೆ, ರಾಜ್ಯ ಕಾರ್ಯಾಧ್ಯಕ್ಷ ಫರ್ನಾಂಡಿಸ್ ಹಿಪ್ಪಳಗಾಂವ, ಉಪಾಧ್ಯಕ್ಷ ರಾಜಕುಮಾರ ಹಳ್ಳಿಖೇಡಕರ್, ಬಂಟಿ ದರಬಾರೆ, ಶಿವರಾಜ ದೋಡ್ಡಿ, ವಿಜಯಕುಮಾರ ಹಿಪ್ಪಳಗಾಂವ, ಹರೀಶ ಗಾಯಕವಾಡ, ನೀಲಕಂಠ ಭೇಂಡೆ, ಅಶೋಖ ಸಂಗನೋರೆ, ಶೀರೋಮಣಿ ನೀಲನೋರ, ಮನೋಜ ತುಂಬರ್ಚಿ, ತುಕಾರಾಂ ಲಾಡೆ, ಶಾದ್ರಕ್, ಸಂಪತ ದರ್ಗೆ, ಸಂಜು ಮಾಳಗೆ, ಸಚೀನ ಅಂಬೆಸಂಗಿ, ಲಕ್ಷ್ಮಣ ಮುದಾಳೆ, ಸತೀಶ ನಿಟ್ಟೂರೆ, ಸ್ವಾಮಿದಾಸ ಮೇಘಾ, ಶಾಲಿವಾನ ಸೂರ್ಯವಂಶಿ, ಸಿದ್ದು ಟೇಲರ್, ವೀರಶೆಟ್ಟಿ ಬಂಬೂಳಗಿ, ಮನೋಹರ ಉಡಬಾಳ, ವಡುರಾಜ ರೇಕುಳಗಿ, ಲಾಲಪ್ಪ ನಿರ್ಣಾ, ವಿಜಯಕುಮಾರ ಸೂರ್ಯವಂಶಿ ಇದ್ದರು.