Advertisement

ನಾಗಮೋಹನದಾಸ್‌ ವರದಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

02:59 PM Jul 12, 2022 | Team Udayavani |

ಕಲಬುರಗಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕ್ರಮವಾಗಿ ಶೇಕಡಾ 15ರಿಂದ 17ಕ್ಕೆ ಹಾಗೂ ಶೇಕಡಾ 3ರಿಂದ 7ರಷ್ಟು ಮೀಸಲಾತಿಗೆ ಶಿಫಾರಸ್ಸು ಮಾಡಲ್ಪಟ್ಟಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಅವರ ಆಯೋಗದ ವರದಿ ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಸೋಮವಾರ ಕರ್ನಾಟಕ ಸ್ವಾಭಿಮಾನಿ ಎಸ್‌ಸಿ, ಎಸ್ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ಮಾಡಿದರು.

Advertisement

ಪ್ರತಿಭಟನೆಕಾರರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಅನುಚ್ಛೇದ 15(4)ರಲ್ಲಿ ಶೈಕ್ಷಣಿಕ ಸಂಸ್ಥೆಗಳ ಪ್ರವೇಶಾತಿಯಲ್ಲಿ ಮೀಸಲಾತಿಯನ್ನು ಕಲ್ಪಿಸಿದೆ. ಅದೇ ರೀತಿ ಅನುಚ್ಛೇದ 16(4) ಮತ್ತು 335ರಲ್ಲಿ ಸಾರ್ವಜನಿಕ ಉದ್ಯೋಗಗಳ ನೇಮಕಾತಿಯಲ್ಲಿ ಸೂಕ್ತ ಪ್ರಾತಿನಿಧ್ಯವನ್ನು ನೀಡಲು ಮೀಸಲಾತಿ ಒದಗಿಸಲಾಗಿದೆ. ಈ ಸಂಬಂಧ ಅಂದಿನ ಮೈಸೂರು ರಾಜ್ಯ ಸರ್ಕಾರ 1958ರ ಫೆಬ್ರವರಿ 4ರಲ್ಲಿ ಶಿಕ್ಷಣ ಸಂಸ್ಥೆಗಳ ಪ್ರವೇಶ ಮತ್ತು ರಾಜ್ಯ ಸರ್ಕಾರದ ಸೇವೆಗಳ ನೇಮಕಾತಿಯಲ್ಲಿ ತಾತ್ಕಾಲಿಕವಾಗಿ ಪರಿಶಿಷ್ಟ ಜಾತಿಯವರಿಗೆ ಶೇಕಡಾ 15 ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡಾ 3ರಷ್ಟು ಮತ್ತು ಹಿಂದುಳಿದ ವರ್ಗದವರಿಗೆ ಶೇಕಡಾ 57ರಷ್ಟು ಮೀಸಲಾತಿ ಕಲ್ಪಿಸಿತ್ತು ಎಂದು ತಿಳಿಸಿದ್ದಾರೆ.

ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟವನ್ನು ಮಾಡಿದ ಪರಿಣಾಮ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಅವರ ಆಯೋಗವು ಕಳೆದ 2020ರ ಜುಲೈ 7ರಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದೆ. ಆ ವರದಿಯನ್ನು ಎರಡು ವರ್ಷಗಳಾದರೂ ಸರ್ಕಾರವು ಅನುಷ್ಠಾನಕ್ಕೆ ತಂದಿಲ್ಲ ಎಂದು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಆದ್ದರಿಂದ ಕೂಡಲೇ ಸರಕಾರ ವರದಿಜಾರಿಗೆ ತರಬೇಕುಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನಂದಕುಮಾರ್‌ ಮಾಲಿಪಾಟೀಲ್‌, ಭೀಮಣ್ಣಾ ಬೋನಾಳ್‌, ಪರಮೇಶ್ವರ್‌ ಖಾನಾಪೂರ್‌, ಮಹಾದೇವ್‌ ಧನ್ನಿ, ವಿಠಲ್‌ ಜಾಧವ್‌, ಮಲ್ಲಿಕಾರ್ಜುನ್‌ ಬಿ. ಕುಸ್ತಿ, ಕಾಶಿರಾಯ್‌ ನಂದೂರಕರ್‌, ಶರಣಬಸಪ್ಪ ಸುಗೂರ್‌, ಶರಣು ಸುಬೇದಾರ್‌, ದಿಗಂಬರ್‌ ಬೆಳಮಗಿ, ಎಸ್‌.ಎಸ್‌. ತವಡೆ, ಶ್ರೀಧರ್‌ (ಗೌತಮ್‌) ಪುಟಗೆ, ಚನ್ನಪ್ಪ ಸುರಪುರ ಕರ್‌, ಮಾರುತಿ ಜಮಾದಾರ್‌, ವೆಂಕಟೇಶ್‌ ಕವಲ್ದಾರ್‌, ರಾಜು ಸಿ.ಎಂ., ಬಿ.ಬಿ. ನಾಯಕ್‌, ಮಂಜುನಾಥ್‌ ನಾಲ ವಾರಕರ್‌, ಪ್ರೇಮಕುಮಾರ್‌ ರಾಠೊಡ್‌ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next