ಧಾರವಾಡ: ಕಾರ್ಮಿಕರ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಟಾಟಾ ಮಾರ್ಕೊಪೋಲೊ ಕ್ರಾಂತಿಕಾರಿ ಕಾರ್ಮಿಕ ಸಂಘದ ವತಿಯಿಂದ ಡಿಸಿ ಕಚೇರಿ ಎದುರು ರವಿವಾರ ಪ್ರತಿಭಟನೆ ನಡೆಸಲಾಯಿತು.
ಕಡಪಾ ಮೈದಾನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಕೈಗೊಂಡ ಕಾರ್ಮಿಕರು ಡಿಸಿ ಕಚೇರಿ ಎದುರು ಕೆಲ ಹೊತ್ತು ಪ್ರತಿಭಟನಾ ಧರಣಿ ಕೈಗೊಂಡರು.
ಹಳೇ ವೇತನ ಒಪ್ಪಂದ ಮುಗಿದು ಎರಡು ವರ್ಷವಾದರೂ ಕಾರ್ಮಿಕರ ವೇತನ ಹೆಚ್ಚಿಸಿಲ್ಲ. ಈ ವಿಷಯವಾಗಿ ಹಲವು ಸುತ್ತಿನ ಮಾತುಕತೆ ಸಹ ನಡೆದಿದೆ. ಕಾರ್ಮಿಕ ಸಚಿವ ಶಿವರಾಮ ಹೆಬ್ಟಾರ ನೇತೃತ್ವದಲ್ಲಿ ನಡೆದ ಸಭೆಯ ತೀರ್ಮಾನಗಳನ್ನು ಕಂಪನಿ ವಿಫಲಗೊಳಿಸಿದೆ.
ಹಾಲಿ ವೇತನ 23,000 ರೂ. ದಿಂದ 50 ಸಾವಿರ ರೂ.ಗೆ ಹೆಚ್ಚಿಸುವುದು, ಕಾರ್ಮಿಕರ ಎಲ್ಲ ಸೌಲಭ್ಯದ ಭತ್ಯೆಗಳನ್ನು ಎರಡು ಪಟ್ಟು ಹೆಚ್ಚಿಸುವುದು, ಕೂಡಲೇ ಕಾರ್ಮಿಕ ವೇತನ ಒಪ್ಪಂದಕ್ಕೆ ಸಹಿ ಹಾಕಿ ಏ.1ರಿಂದ ಹೊಸ ವೇತನ ಅನ್ವಯಿಸಬೇಕು. ವಜಾಗೊಳಿಸಿದ್ದ 7 ಕಾರ್ಮಿಕರನ್ನು ನ್ಯಾಯಾಲಯದ ಆದೇಶದ ಪ್ರಕಾರ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಾರಿಗೆ ಸೌಲಭ್ಯವನ್ನು 60 ಕಿಮೀಗೆ ವಿಸ್ತರಿಸುವುದು, ಕಾರ್ಮಿಕರ ತಂದೆ-ತಾಯಿಗೆ ವೈದ್ಯಕೀಯ ಸೌಲಭ್ಯ, ಸುಸಜ್ಜಿತ ಕ್ಯಾಂಟೀನ್ ವ್ಯವಸ್ಥೆ, ಕಾರ್ಮಿಕರ ಮೇಲಿನ ಕಿರುಕುಳ ನಿಲ್ಲಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಉಪವಿಭಾಗಾಧಿಕಾರಿ ಅಶೋಕ ತೇಲಿ ಹಾಗೂ ತಹಶೀಲ್ದಾರ್ ಡಾ| ಸಂತೋಷಕುಮಾರ ಬಿರಾದಾರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂಘಟನೆ ಮುಖ್ಯಸ್ಥರಾದ ಆರ್. ಮಾನಸಯ್ಯ, ಮಲ್ಲಿಕಾರ್ಜುನ ಮರಿತಮ್ಮನವರ, ಕೆ.ಬಿ. ಗೋನಾಳ, ಸಿದ್ದನಗೌಡ ಪಾಟೀಲ, ಶಿವಯೋಗಿ ಹಾಲಭಾವಿ, ವೀರೇಶ ಪಾಟೀಲ ಮೊದಲಾದವರಿದ್ದರು.