ವಿಜಯಪುರ: ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಜಿಲ್ಲೆಯಲ್ಲಿ ಮಳೆ ಇಲ್ಲದೆ ಹಾಗೂ ಅಕಾಲಿಕ ಮಳೆಗೆ ಜಿಲ್ಲೆಯ ರೈತರು ಬೆಳೆದ ಕೃಷಿ-ತೋಟಗಾರಿಕೆ ಬೆಳೆ ಅಪಾರ ಪ್ರಮಾಣದಲ್ಲಿ ಹಾಗಿದೆ. ಹೀಗಾಗಿ ಕೂಡಲೇ ಸರ್ಕಾರ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ, ರೈತರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಹಾನಿಯಾದ ತೊಗರಿ ಬೆಳೆಗೆ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ನಷ್ಟ ಪರಿಹಾರ ನೀಡಬೇಕು. ಕಳೆದ 5-6 ವರ್ಷಗಳಿಂದ ಸಕಾಲಕ್ಕೆ ಮಳೆಯಾದ ರೈತರು ಬಿತ್ತಿದ ಬೆಳೆ ಕೈ ಸೇರದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸಕ್ತ ವರ್ಷವೂ ಮುಂಗಾರು ಹಂಗಾಮಿನಲ್ಲಿ ಬಿತ್ತಿದ ತೊಗರಿ ಬೆಳೆ ಸಕಾಲಕ್ಕೆ ಮಳೆಯಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಶೇ. 75 ತೊಗರಿ ನಾಶವಾಗಿದೆ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ತೊಗರಿ ಬೆಳೆಗೆ ಅಗತ್ಯವಿದ್ದ ಮಳೆಯಾಗದೇ ಬೆಳೆ ಹಾನಿಯಾಗಿದೆ ಎಂದು ವಿವರಿಸಿದರು.
ಬಸವನಬಾಗೇವಾಡಿ ತಾಲೂಕು ಗೌರವಾಧ್ಯಕ್ಷ ಈರಣ್ಣ ದೇವರ ಗುಡಿ ಮಾತನಾಡಿ, ಜಿಲ್ಲೆಯಲ್ಲಿ ಸೂಕ್ತ ಸಂದರ್ಭದಲ್ಲಿ ಮಳೆ ಆಗದ ಕಾರಣ ತೊಗರಿ ಬೆಳೆ ಸರಿಯಾಗಿ ಬೆಳವಣಿಗೆ ಕುಂಠಿತವಾಗಿ ಸಂಪೂರ್ಣ ಇಳುವರಿ ಕಡಿಮೆಯಾಗಿದೆ. ಆದರೂ ಸರ್ಕಾರ ವಿಜಯಪುರ ಜಿಲ್ಲೆಯನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲ್ಲ ಎಂದು ಹರಿಹಾಯ್ದರು.
ರಾಜ್ಯದ ಕೆಲ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಿಂದ ತೊಗರಿ ಬೆಳೆ ಸೇರಿದಂತೆ ಇನ್ನಿತರ ಬೆಳೆ ಹಾಳಾಗಿದ್ದು ಆ ಜಿಲ್ಲೆಗಳಲ್ಲಿ ಪರಿಹಾರ ಹಣ ಘೋಷಿಸಿದೆ. ಆದ್ದರಿಂದ ವಿಜಯಪುರ ಜಿಲ್ಲೆಯನ್ನೂ ಬರಗಾಲ ಜಿಲ್ಲೆ ಎಂದು ಘೋಷಿಸಬೇಕು. ಶೀಘ್ರದಲ್ಲಿ ಬೆಳೆ ಪರಿಹಾರ ಬಿಡುಗಡೆಗೊಳಿಸಿ, ರೈತರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.
ಬಸವನಬಾಗೇವಾಡಿ ತಾಲೂಕು ಘಟಕದ ಹೊನ್ನಕೇರೆಪ್ಪ ತೆಲಗಿ, ಕೃಷ್ಣಪ್ಪ ಬೊಮರಡ್ಡಿ, ವಿಠ್ಠಲ ಬಿರಾದಾರ, ರೇವಪ್ಪ ಪೋಲೇಶಿ, ಮಲ್ಲಪ್ಪ ಮಾಡ್ಯಾಳ, ರಾಜೇಸಾ ವಾಲೀಕಾರ, ಚನ್ನಬಸಪ್ಪ ಸಿಂಧೂರ, ಚಂದ್ರಾಮ ಹಿಪ್ಪಲಿ, ಅಣ್ಣಾರಾಯ ಬಿರಾದಾರ, ಸಿದ್ದಪ್ಪ ಕಲಬೀಳಗಿ, ಸಂಗಪ್ಪ ಮುಂಡಗನೂರ, ಪರಮಾನಂದ ಮುತ್ಯಾ, ಸುರೇಶ ಶಿವಯೋಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.