ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇರುವಂತಹ ನಿವೇಶನ ರಹಿತರನ್ನು ಗುರುತಿಸಿ ನಿವೇಶನ, ಮನೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಸೋಮವಾರ ಆವರಗೆರೆ 23ನೇ ವಾರ್ಡ್ ಕೊಳಗೇರಿ ನಿವಾಸಿಗಳ ಸಂಘದ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಸ್ಮಾರ್ಟ್‌ಸಿಟಿ ಆಗುತ್ತಿರುವ ದಾವಣಗೆರೆಯಲ್ಲಿ ಸಾವಿರಾರು ಜನರು ನಿವೇಶನರಹಿತರು, ಸ್ವಂತ ಸೂರಿಲ್ಲದವರು ಇದ್ದಾರೆ. ಕಳೆದ ಹಲವಾರು ವರ್ಷಗಳಿಂದ ಆಶ್ರಯ ಯೋಜನೆಯಡಿ ಯಾರೊಬ್ಬರಿಗೆ ಮನೆ, ನಿವೇಶನ ಕೊಟ್ಟಿಲ್ಲ. ತಲೆಗೊಂದು ಸೂರು… ಎನ್ನುವುದು ಬರೀ ಘೋಷಣೆಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ದಾವಣಗೆರೆ ನಗರದ ಆವರಗೆರೆ ಶೇಖರಪ್ಪ ಬಡಾವಣೆ, ಆಂಜನೇಯ ಮಿಲ್ ಬಡಾವಣೆ, ಪಿ. ಬಸವನ ಗೌಡ ಬಡಾವಣೆ, ಗೋಶಾಲೆ ಹಳ್ಳದ ಪಕ್ಕ ಗುಡಿಸಲುಗಳು. ರಾಮನಗರ ನಗರದ ವಿವಿಧ ಬಡಾವಣೆಗಳ ಜನರು ನಿವೇಶನ, ಮನೆ ಇಲ್ಲದೆ ಹಲವು ವರ್ಷಗಳಿಂದ ಮಹಾನಗರ ಪಾಲಿಕೆ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಈವರೆಗೆ ನಿವೇಶನ, ಆಶ್ರಯಮನೆ ಕೊಡಲಿಕ್ಕೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ದೂರಿದರು.
ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಜೀವನ ನಡೆಸುವುದು ಕಷ್ಟ ಆಗುತ್ತಿದೆ. ನಿವೇಶನ ರಹಿತರ ಸಮಸ್ಯೆ ಅರ್ಥಮಾಡಿಕೊಂಡು ಕೂಡಲೇ ನಿವೇಶನ, ಮನೆ ಸೌಲಭ್ಯ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಆವರಗೆರೆ ವಾಸು, ಪ್ರಧಾನ ಕಾರ್ಯದರ್ಶಿ ಸಿ. ಗುರುಮೂರ್ತಿ, ಕೆರನಹಳ್ಳಿರಾಜು, ಮಂಜುನಾಥ ಡಿ. ತಿಪ್ಪೇಶಿ ಎ. ಶಾರದಾ, ಗೋಶಾಲೆ ಲತಾ, ಮಂಜುಳಾ, ಪ್ರೇಮ, ಕವಿತಾ, ಸೈಯದ್ ಖಾಜಾಪೀರ್, ರಂಗನಾಥ್, ಇತರರು ಇದ್ದರು.