Advertisement

Mangaluru; ಸೌಜನ್ಯಾ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಪ್ರತಿಭಟನೆ

11:42 PM Aug 20, 2023 | Team Udayavani |

ಮಂಗಳೂರು: ಸೌಜನ್ಯಾಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನ್ಯಾಯ ಕೇಳುವವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. 11 ವರ್ಷಗಳ ಕಾಲ ಶಾಂತಿಯುತವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಕ್ರಾಂತಿಯಾಗಲಿದೆ ಎಂದು ಸಾಮಾಜಿಕ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿ ಹೇಳಿದ್ದಾರೆ.

Advertisement

ರವಿವಾರ ಮಂಗಳೂರಿನ ಕದ್ರಿ ಮೈದಾನದಲ್ಲಿ ಸೌಜನ್ಯಾ ಹೋರಾಟ ಸಮಿತಿ ನೇತೃತ್ವದಲ್ಲಿ ಆಯೋಜಿಸಲಾದ ಬೃಹತ್‌ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶದಲ್ಲಿ ಮಾನವೀಯತೆ, ಕಾನೂನು ಸತ್ತು ಹೋಗಿದೆ. ಸೌಜನ್ಯಾಳನ್ನು ಅತ್ಯಾಚಾರಗೈದು ಹತ್ಯೆ ಮಾಡಿದವರು ಜೈಲಿಗೆ ಹೋಗಿಲ್ಲ. ಕಾನೂನು ರೀತಿಯಲ್ಲಿ ನ್ಯಾಯ ಸಿಗದಿದ್ದರೆ ಅದನ್ನು ಕಸಿದುಕೊಳ್ಳಲು ಪ್ರಜಾಪ್ರಭುತ್ವಕ್ಕೆ ಗೊತ್ತಿದೆ. ಅದಕ್ಕೆ ಅವಕಾಶ ನೀಡಬಾರದು.

ಆದಷ್ಟು ಶೀಘ್ರ ಪ್ರಕರಣದ ಮರುತನಿಖೆಯಾಗಬೇಕು. ಗೃಹಸಚಿವ ಪರಮೇಶ್ವರ್‌ ಅವರು ಸೌಜನ್ಯಾ ಪ್ರಕರಣ ಮುಗಿದ ಅಧ್ಯಾಯ ಎಂದಿದ್ದಾರೆ. ಅವರ ಮನೆ ಬಾಗಿಲಿಗೆ ಮುತ್ತಿಗೆ ಹಾಕುವಾಗ ಅವರಿಗೆ ನಮ್ಮ ಹೋರಾಟ ಏನೆಂಬುದು ಗೊತ್ತಾಗಲಿದೆ. ಸೆ.3ರಂದು ಬೆಳ್ತಂಗಡಿ ತಾಲೂಕಿನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಮಹೇಶ್‌ ಶೆಟ್ಟಿ ಹೇಳಿದರು.

ನ್ಯಾಯದ ಭರವಸೆ
ಸೌಜನ್ಯಾಳ ತಾಯಿ ಕುಸುಮಾವತಿ ಮಾತನಾಡಿ, ನ್ಯಾಯಾಕ್ಕಾಗಿ 11 ವರ್ಷಗಳಿಂದ ಊರಿಡೀ ಸುತ್ತಿದ್ದೇವೆ. ಈಗ ನಮ್ಮ ಹೋರಾಟಕ್ಕೆ ಜನ ಸೇರುತ್ತಿರುವುದು ಕಂಡಾಗ ನ್ಯಾಯ ಸಿಗುವ ಭರವಸೆ ಮೂಡಿದೆ ಎಂದು ಹೇಳಿದರು.

Advertisement

ಸಮಿತಿಯ ಸಂಚಾಲಕಿ ಪ್ರಸನ್ನ ರವಿ ಅವರು ಮಾತನಾಡಿ, ಎಲ್ಲ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಒಂದಾಗಿ ಮುಖ್ಯಮಂತ್ರಿ, ಪ್ರಧಾನಮಂತ್ರಿ, ಗೃಹಸಚಿವರು, ರಾಷ್ಟ್ರಪತಿಯವರಿಗೆ ಒತ್ತಡ ಹಾಕಬೇಕು. ನ್ಯಾಯ ಸಿಗದಿದ್ದರೆ ಚುನಾವಣೆ ಬಹಿಷ್ಕಾರ ಮಾಡಬೇಕು ಎಂದು ಹೇಳಿದರು.

ಪ್ರತಿಭಟನೆಗೂ ಮೊದಲು ಕದ್ರಿ ದೇವಸ್ಥಾನದಿಂದ ಮೈದಾನದವರಿಗೆ ಪಾದಯಾತ್ರೆ ನಡೆಯಿತು. ಕದ್ರಿ ಜೋಗಿಮಠದ ಶ್ರೀ ನಿರ್ಮಲನಾಥಜಿ ಕಾರ್ಯಕ್ರಮ ಉದ್ಘಾಟಿಸಿದರು. ಶಶಿಕಲಾ ಶೆಟ್ಟಿ ಸ್ವಾಗತಿಸಿ ರೋಹಿತ್‌ ಉಳ್ಳಾಲ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next