Advertisement

ಮೋಟಾರು ವಾಹನ ತೆರಿಗೆ ವಿನಾಯ್ತಿಗೆ ಒತ್ತಾಯಿಸಿ ಪ್ರತಿಭಟನೆ

12:38 PM Oct 30, 2017 | |

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಮೋಟಾರು ವಾಹನ ತೆರಿಗೆ ವಿನಾಯ್ತಿ ಮುಂದುವರಿಸಬೇಕು. ಸಂಸ್ಥೆಗೆ ಬರಬೇಕಾದ ಬಾಕಿ ಹಣ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖೀಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿಯಿಂದ ರವಿವಾರ ಸಂಸ್ಥೆ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. 

Advertisement

ಗೋಕುಲ ರಸ್ತೆಯ ಡಾ| ಕೆ.ಎಸ್‌. ಶರ್ಮಾ ಭವನದ ಆವರಣದಿಂದ ಮೆರವಣಿಗೆ ಮೂಲಕ ಆಗಮಿಸಿದ ಮಹಾಮಂಡಳಿ ಪದಾಧಿಕಾರಿಗಳು ಸಂಸ್ಥೆ ಕೇಂದ್ರ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಂತರ ಮಿನಿವಿಧಾನಸೌಧಕ್ಕೆ ಆಗಮಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಮಹಾಮಂಡಳಿ ಅಧ್ಯಕ್ಷ ಡಾ| ಕೆ.ಎಸ್‌. ಶರ್ಮಾ, ಸರಕಾರದಿಂದ ಬರಬೇಕಾದ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ಬಾಕಿ ಉಳಿದಿರುವುದರಿಂದ ವಾಯವ್ಯ ಸಾರಿಗೆ ಸಂಸ್ಥೆ ತೀವ್ರ ಆರ್ಥಿಕ ನಷ್ಟ ಅನುಭವಿಸುವಂತಾಗಿದೆ.

ಮೋಟಾರು ವಾಹನ ತೆರಿಗೆಯಲ್ಲಿ ವಿನಾಯಿತಿ ನೀಡಿದ್ದರಿಂದ ಸಂಸ್ಥೆಗೆ ಸಾಕಷ್ಟು ಅನುಕೂಲವಾಗಿತ್ತು. ಹೀಗಾಗಿ ಈ ವಿನಾಯಿತಿಯನ್ನು ಸರಕಾರ ಮುಂದುವರಿಸಬೇಕು. ವಿದ್ಯಾರ್ಥಿ ರಿಯಾಯ್ತಿ ಪಾಸ್‌ಗೆ ಸಂಬಂಧಿಸಿ ಕಳೆದ ಮೂರು ವರ್ಷಗಳಿಂದ ಸರಕಾರದಿಂದ ಬರಬೇಕಾದ 485 ಕೋಟಿ ರೂ. ಬಾಕಿಯನ್ನು ಕೂಡಲೇ ನೀಡಬೇಕು. 

ಸಂಸ್ಥೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ ಈ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಸಂಸ್ಥೆಯ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರಕಾರ ಆರ್ಥಿಕ ಭರವಸೆ ಪತ್ರ ನೀಡಬೇಕು. ನೌಕರರ ವೇತನ ಹೆಚ್ಚಳ ಹಾಗೂ ಅಂತರ್‌ ನಿಗಮಗಳಿಗೆ ವರ್ಗಾವಣೆ ಕಲ್ಪಿಸಿದ್ದರಿಂದ ಸಾವಿರಾರು ನೌಕರರಿಗೆ ಸಾಕಷ್ಟು ಅನುಕೂಲವಾಗಿದೆ.

Advertisement

ಅದರಂತೆ ನೌಕರರ ಉಳಿದ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು. ಅಧ್ಯಕ್ಷ ಸದಾನಂದ ಡಂಗನವರ ಮನವಿ ಸ್ವೀಕರಿಸಿ ಮಾತನಾಡಿ, ಈ ಬಗ್ಗೆ ಈಗಾಗಲೇ ಸಾರಿಗೆ ಸಚಿವರಿಂದ ಹಿಡಿದು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಸರಕಾರದಿಂದ ಸಕರಾತ್ಮಕ ಸ್ಪಂದನೆ ಸಿಕ್ಕಿದ್ದು, ಇಷ್ಟರಲ್ಲೇ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಹೇಳಿದರು. ಸಿಎಫ್ಒ ಶಾಂತಪ್ಪ ಗೋಟಖಂಡಕಿ ಇದ್ದರು. ಪ್ರಧಾನ ಕಾರ್ಯದರ್ಶಿ ಜಿ. ಪ್ರಕಾಶ ಮೂರ್ತಿ, ಉಪಾಧ್ಯಕ್ಷ ಜಿ.ಬಿ. ಕುಲಕರ್ಣಿ,

-ಸಂಘಟನಾ ಕಾರ್ಯದರ್ಶಿ ಐ.ಎಚ್‌. ಮಾಡಿವಾಲೆ, ಸಿ.ಎ. ಕೋಟಿ, ಎಂ.ವಿ. ಕಲಬಾವಿ, ಎಸ್‌.ಕೆ. ಅಯ್ಯನಗೌಡರ, ರಮೇಶ, ಎಸ್‌.ಆರ್‌. ಅದರಗುಂಚಿ ಸೇರಿದಂತೆ ವಿವಿಧ ವಿಭಾಗಗಳಿಂದ ಆಗಮಿಸಿದ್ದ ಮಹಾಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next