ಉಡುಪಿ: ಬಿಎಸ್‌ಎನ್‌ಎಲ್ ಸಂಸ್ಥೆಯು ರಾಜ್ಯಾದ್ಯಂತ ಇರುವ ಸುಮಾರು 3 ಸಾವಿರ ಗುತ್ತಿಗೆ ನೌಕರರ ವೇತನವನ್ನು ಬಾಕಿಯಿರಿಸಿದ್ದು, ಕೂಡಲೇ ಪಾವತಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಬಿಎಸ್‌ಎನ್‌ಎಲ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ ಆಗ್ರಹಿಸಿದರು.
ಬಿಎಸ್‌ಎನ್‌ಎಲ್ ಗುತ್ತಿಗೆ ಕಾರ್ಮಿಕ ರಿಗೆ 5 ತಿಂಗಳಿನಿಂದ ವೇತನ ನೀಡದೆ ಇರುವುದನ್ನು ವಿರೋಧಿಸಿ ಸೆಂಟರ್ ಆಫ್ ಟ್ರೇಡ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮಿತಿಯ ವತಿಯಿಂದ ಸೋಮವಾರ ಬಿಎಸ್‌ಎನ್‌ಎಲ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಿಎಸ್‌ಎನ್‌ಎಲ್ ಆಡಳಿತ ಮಂಡಳಿಯು ಗುತ್ತಿಗೆ ಕಾರ್ಮಿಕರ ವೇತನವನ್ನು 5 ತಿಂಗಳಿನಿಂದ ಬಾಕಿ ಇರಿಸಿದೆ. ಬಾಕಿ ಪಾವತಿಯನ್ನು ಶೀಘ್ರದಲ್ಲಿ ಪಾವತಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಬಿಎಸ್‌ಎನ್‌ಎಲ್ ಉಳಿಸಿ
ಸಾರ್ವಜನಿಕ ರಂಗದ ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರಸರಕಾರ ಅಗತ್ಯ ಕ್ರಮ ಕೈಗೊಳ್ಳ ಬೇಕು. 4ಜಿ ಸೇವೆಯನ್ನು ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭ ಸಿಐಟಿಯು ಮುಖಂಡ ರಾದ ಪಿ. ವಿಶ್ವನಾಥ ರೈ, ಬಾಲಕೃಷ್ಣ ಶೆಟ್ಟಿ, ರಾಮ ಕರ್ಕಡ, ವಿಟuಲ ಪೂಜಾರಿ, ಶೇಖರ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.